SK Home Ad
Home ಸಿನಿ ಮಿಲ್ಸ್ ಚಿತ್ರಕಥೆಯ ಮಾಂತ್ರಿಕ, ಖ್ಯಾತ ನಟ-ನಿರ್ದೇಶಕ ಕೆ. ಭಾಗ್ಯರಾಜ್ ಇನ್ನಿಲ್ಲ

ಚಿತ್ರಕಥೆಯ ಮಾಂತ್ರಿಕ, ಖ್ಯಾತ ನಟ-ನಿರ್ದೇಶಕ ಕೆ. ಭಾಗ್ಯರಾಜ್ ಇನ್ನಿಲ್ಲ

0
62

ತಮಿಳು ಚಿತ್ರರಂಗದ ‘ಸ್ಕ್ರೀನ್‌ಪ್ಲೇ ಕಿಂಗ್’ ಹಿರಿಯ ನಟ-ನಿರ್ದೇಶಕ ಕೆ. ಭಾಗ್ಯರಾಜ್ 73ನೇ ವಯಸ್ಸಿನಲ್ಲಿ ನಿಧನ

ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ, ಚಿತ್ರಕಥೆಗಾರ ಹಾಗೂ ಲೇಖಕರಾಗಿದ್ದ ಕೆ. ಭಾಗ್ಯರಾಜ್ ಅವರು ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಹೃದಯಾಘಾತಕ್ಕೊಳಗಾದ ಅವರನ್ನು ತಕ್ಷಣವೇ ಚೆನ್ನೈನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿ ತಮಿಳು ಚಿತ್ರರಂಗ ಹಾಗೂ ಅಭಿಮಾನಿಗಳಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.

1953ರ ಜನವರಿ 7ರಂದು ತಮಿಳುನಾಡಿನ ಈರೋಡ್ ಜಿಲ್ಲೆಯ ಸಮೀಪ ಜನಿಸಿದ ಕೃಷ್ಣಸ್ವಾಮಿ ಭಾಗ್ಯರಾಜ್ ಅವರು ತಮ್ಮ ಸಿನಿಜೀವನವನ್ನು ಖ್ಯಾತ ನಿರ್ದೇಶಕ ಭಾರತಿರಾಜಾ ಅವರ ಸಹಾಯಕ ನಿರ್ದೇಶಕರಾಗಿ ಆರಂಭಿಸಿದ್ದರು. ನಂತರ ತಮ್ಮದೇ ಆದ ವಿಶಿಷ್ಟ ಶೈಲಿಯ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳ ಮೂಲಕ ತಮಿಳು ಚಿತ್ರರಂಗದಲ್ಲಿ ಅಪ್ರತಿಮ ಸ್ಥಾನವನ್ನು ನಿರ್ಮಿಸಿಕೊಂಡರು.

ಕುಟುಂಬ ಕಥಾಹಂದರ, ಹಾಸ್ಯ ಹಾಗೂ ಸಾಮಾಜಿಕ ಸಂದೇಶಗಳನ್ನು ಒಳಗೊಂಡ ಚಿತ್ರಗಳ ಮೂಲಕ ಭಾಗ್ಯರಾಜ್ ಅಪಾರ ಜನಪ್ರಿಯತೆ ಗಳಿಸಿದ್ದರು. ಅಂಧಾ 7 ನಾಟ್ಕಲ್, ಮುಂದಾನೈ ಮುಡಿಚು, ಚಿನ್ನ ವೀಡು, ಎಂಗ ಚಿನ್ನ ರಾಸಾ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ಅವರು ನಿರ್ದೇಶಿಸಿ, ನಟಿಸಿದ್ದರು. ಚಿತ್ರಕಥೆ, ನಿರ್ದೇಶನ, ಅಭಿನಯ ಮತ್ತು ಕೆಲವೊಮ್ಮೆ ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನೂ ನಿರ್ವಹಿಸುವ ಮೂಲಕ ಅವರು “ಒನ್ ಮ್ಯಾನ್ ಸ್ಟುಡಿಯೋ” ಎಂದೇ ಖ್ಯಾತಿ ಪಡೆದಿದ್ದರು.

ಕನ್ನಡದ ನಂಟು: 1987 ರಲ್ಲಿ ಬಿಡುಗಡೆಯಾದ ಇವರ ಸೂಪರ್ ಹಿಟ್ ತಮಿಳು ಚಿತ್ರ ಎಂಗ ಚಿನ್ನ ರಸ, ಡಾ. ರಾಜ್‌ಕುಮಾರ್ ಅಭಿನಯದ ಪ್ರಸಿದ್ಧ ಹಳೆಯ ಕನ್ನಡ ಚಲನಚಿತ್ರ ಮಲ್ಲಮ್ಮನ ಪವಾಡ ಚಿತ್ರದ ರಿಮೇಕ್ ಆಗಿದೆ.

ಪತ್ರಿಕೋದ್ಯಮ: ಚಿತ್ರರಂಗದ ಜೊತೆಗೆ ಇವರು ತಮಿಳಿನ ಪ್ರಸಿದ್ಧ ವಾರಪತ್ರಿಕೆಯಾದ “ಭಾಗ್ಯ”ದ ಸಂಪಾದಕರಾಗಿದ್ದಾರೆ ಮತ್ತು ಹಲವಾರು ಕಾದಂಬರಿಗಳನ್ನು ಬರೆದಿದ್ದಾರೆ.

ಭಾಗ್ಯರಾಜ್ ಅವರ ಅಗಲಿಕೆಯಿಂದ ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ. ಇತ್ತೀಚೆಗಷ್ಟೇ ತಮ್ಮ 50 ವರ್ಷಗಳ ಸಿನಿಜೀವನವನ್ನು ಆಚರಿಸಿಕೊಂಡಿದ್ದ ಅವರು ಹೊಸ ಸಿನಿಮಾ ಹಾಗೂ ವೆಬ್ ಸರಣಿಯ ಯೋಜನೆಗಳನ್ನೂ ಘೋಷಿಸಿದ್ದರು.