ಸಂ. ಕ. ಸಮಾಚಾರ, ಮಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರದ ಮೂಲಕ ಹೊಸ ಚರ್ಚೆ ಹುಟ್ಟುಹಾಕಿದ ‘ಸು ಫ್ರಮ್ ಸೋ’ ಚಿತ್ರದ ನಿರ್ದೇಶಕ ಮತ್ತು ನಟ ಜೆ.ಪಿ. ತುಮಿನಾಡು ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನ ಪಿಲಿಕುಳದಲ್ಲಿರುವ ಸ್ಕೌಟ್ ಭವನದಲ್ಲಿ ನಡೆದ ಸರಳ ಆದರೆ ಸಾಂಪ್ರದಾಯಿಕ ಸಮಾರಂಭದಲ್ಲಿ ಅವರು ರಶ್ಮಿಕಾ ಅವರೊಂದಿಗೆ ಸಪ್ತಪದಿ ತುಳಿದರು.
ಈ ಮದುವೆ ಸಮಾರಂಭದಲ್ಲಿ ನಿರೂಪಕ ನಿರಂಜನ್ ದೇಶಪಾಂಡೆ, ನಟಿ ಸಂಧ್ಯಾ ಅರಕೆರೆ ಹಾಗೂ ನಿರ್ದೇಶಕ ಶ್ರೀನಿಧಿ ಸೇರಿದಂತೆ ಹಲವರು ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದರು. ಸಮಾರಂಭವು ಆಪ್ತರು ಮತ್ತು ಸಿನಿ ವಲಯದ ಗಣ್ಯರ ಸಮ್ಮುಖದಲ್ಲಿ ನಡೆಯಿತು.
ಮದುವೆಯ ಸಂತಸದ ಕ್ಷಣಗಳನ್ನು ಜೆ.ಪಿ. ತುಮಿನಾಡು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಸರಳ ವೇಷಭೂಷಣದಲ್ಲಿ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ಮೂಲದ ತುಮಿನಾಡು ಅವರು ಚಿತ್ರರಂಗಕ್ಕೆ ಬರುವ ಮೊದಲು ಸುಮಾರು ದಶಕಕ್ಕೂ ಹೆಚ್ಚು ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ನಾಟಕ ರಚನೆ ಮತ್ತು ನಿರ್ದೇಶನದಲ್ಲಿ ಹೆಸರು ಮಾಡಿದ್ದ ಅವರು ಆರಂಭಿಕ ಜೀವನದಲ್ಲಿ ಪೈಂಟರ್ ಆಗಿಯೂ ಕೆಲಸ ಮಾಡಿದ್ದರು.
ಇವರ ನಿರ್ದೇಶನದ ಸು ಫ್ರಮ್ ಸೋ ಚಿತ್ರ 2025ರಲ್ಲಿ ಅತಿ ಕಡಿಮೆ ಬಜೆಟ್‌ನಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಕಥೆಯೇ ಸಿನಿಮಾದ ಹೀರೋ ಎಂಬುದನ್ನು ಸಾಬೀತುಪಡಿಸಿದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 125 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು.
ಈಗ ವೈಯಕ್ತಿಕ ಜೀವನದ ಹೊಸ ಅಧ್ಯಾಯ ಆರಂಭಿಸಿರುವ ತುಮಿನಾಡು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಭಿನ್ನ ಕಥೆಗಳೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂಬ ನಿರೀಕ್ಷೆ ಇದೆ.























