ನವದೆಹಲಿ: ಕರ್ನಾಟಕ ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಎಲ್ಲದರ ಬೆಲೆ ಏರಿಕೆ ಮಾಡಿ ಜನರಿಂದಲೇ ಬರೋಬ್ಬರಿ ₹60,000 ಕೋಟಿ ಸಂಗ್ರಹಿಸುತ್ತಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.
ದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ, ವಿವಿಧ ಸೇವಾ ಶುಲ್ಕಗಳ ಹೆಚ್ಚಳ ಮೂಲಕ ಜನರಿಂದಲೇ ₹60,000 ಕೋಟಿ ವಸೂಲಿ ಮಾಡುತ್ತಿದೆ ಎಂದು ಕಿಡಿಕಾರಿದರು.
ತೈಲ ಮಾರಾಟ ತೆರಿಗೆ ಹೆಚ್ಚಳ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯ ಮಾರಾಟ ತೆರಿಗೆಯನ್ನು ಹಲವು ಬಾರಿ ಹೆಚ್ಚಿಸಿದೆ. 2024ರ ಜೂನ್ 15ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದಿಂದ ಬೆಲೆಯಲ್ಲಿ ಪ್ರತಿ ಲೀಟರ್ಗೆ ಸುಮಾರು ₹3 ಏರಿಕೆ ಮಾಡಿದೆ. 2025ರ ಏಪ್ರಿಲ್ 1ರಂದು ಡೀಸೆಲ್ ಮೇಲಿನ ತೆರಿಗೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಸುಮಾರು ₹2 ಏರಿಕೆಯಾಗಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ ಸುಮಾರು ₹3 ಹಾಗೂ ಡೀಸೆಲ್ ಬೆಲೆ ₹5 ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಅಬಕಾರಿ ಸುಂಕಕ್ಕೆ ಹೋಲಿಸಿದರೆ ರಾಜ್ಯದ ಮಾರಾಟ ತೆರಿಗೆ ಪೆಟ್ರೋಲ್ ಮೇಲೆ 2.1 ಪಟ್ಟು ಹಾಗೂ ಡೀಸೆಲ್ ಮೇಲೆ 2.2 ಪಟ್ಟು ಹೆಚ್ಚಾಗಿದೆ ಎಂದರು.
ಆದಾಯಕ್ಕಾಗಿ ಯಾವುದರ ಬೆಲೆ ಎಷ್ಟು ಏರಿಕೆ: ರಾಜ್ಯ ಕಾಂಗ್ರೆಸ್ ಸರ್ಕಾರ ಒಂದೆಡೆ ಗ್ಯಾರೆಂಟಿ ಕೊಟ್ಟು, ಮತ್ತೊಂದೆಡೆ ಆದಾಯಕ್ಕಾಗಿ ಇದ್ದಬದ್ದ ಎಲ್ಲದರ ಬೆಲೆಯನ್ನೂ ಹೆಚ್ಚಿಸಿ ಜನಸಾಮಾನ್ಯರಿಂದಲೇ ಹಣ ಸಂಗ್ರಹಿಸುತ್ತಿದೆ ಎಂದು ಸಚಿವ ಜೋಶಿ ನೇರ ಆರೋಪ ಮಾಡಿದರು.
ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಳದಿಂದ ₹1,300 ಕೋಟಿ ಹಾಗೂ ಮದ್ಯದ ಮೇಲಿನ ಸುಂಕ ಹೆಚ್ಚಳದಿಂದ ₹4,500 ಕೋಟಿ ಹೆಚ್ಚುವರಿ ಆದಾಯ ಸಂಗ್ರಹಿಸಿಕೊಳ್ಳುತ್ತಿದೆ. ಬಸ್ ಪ್ರಯಾಣ ದರ ಹೆಚ್ಚಳದಿಂದ ₹1,000 ಕೋಟಿ ಹಾಗೂ ಮೆಟ್ರೋ ಪ್ರಯಾಣ ದರ ಹೆಚ್ಚಳದಿಂದ ₹450 ಕೋಟಿ ಹೆಚ್ಚುವರಿ ಹೊರೆಯನ್ನು ಜನರ ಮೇಲೆ ಹೊರಿಸಿದೆ ಎಂದು ಕಿಡಿಕಾರಿದರು.
ವಿದ್ಯುತ್ ದರವನ್ನು ಎರಡು ಬಾರಿ ಹೆಚ್ಚಿಸುವ ಮೂಲಕ ₹12,000 ಕೋಟಿ ಆದಾಯ ಪಡೆಯುತ್ತಿದೆ. ವಿದ್ಯುತ್ ಚಾಲಿತ ವಾಹನಗಳ ಮೇಲಿನ ಜೀವಿತಾವಧಿ ತೆರಿಗೆಯನ್ನು ಶೇ.9ರಿಂದ ಶೇ.15ಕ್ಕೆ ಹೆಚ್ಚಿಸಿದೆ. ಎಲೆಕ್ಟ್ರಿಕ್ ವೆಹಿಕಲ್ ಗಳಿಗೆ ಸಬ್ಸಿಡಿ ಕೊಡುವುದನ್ನು ಬಿಟ್ಟು ಶುಲ್ಕ ಹೆಚ್ಚಿಸಿದ ಕಾಂಗ್ರೆಸ್ ಸರ್ಕಾರ ಇದರಿಂದ ₹3,712 ಕೋಟಿ ಆದಾಯ ಸಂಗ್ರಹಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಮುದ್ರಾಂಕ ಶುಲ್ಕದಲ್ಲಿ ಶೇ.2ರಷ್ಟು ಹೆಚ್ಚಳದಿಂದ ₹3,000 ಕೋಟಿ ಆದಾಯವನ್ನು ಹೆಚ್ಚಿಸಿಕೊಂಡಿದೆ. ಮೃಗಾಲಯಗಳ ಪ್ರವೇಶ ಶುಲ್ಕ ಹೆಚ್ಚಳದಿಂದ ₹25 ಕೋಟಿ ಹಾಗೂ ಕಾರ್ಮಿಕ ಕಲ್ಯಾಣ ನಿಧಿ ಹೆಚ್ಚಳದಿಂದ ₹25 ಕೋಟಿ ಸಂಗ್ರಹವಾಗುತ್ತಿದೆ.
ಇದಲ್ಲದೆ ಅಂಗಡಿಗಳ ಪರವಾನಗಿ ಶುಲ್ಕವನ್ನು ಬರೋಬ್ಬರಿ ಶೇ.150ರಷ್ಟು ಹೆಚ್ಚಿಸಲಾಗಿದೆ. ಬಿಬಿಎಂಪಿ ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕದಿಂದ ₹5,000 ಕೋಟಿ, ಕಸದ ತೆರಿಗೆಯಿಂದ ₹750 ಕೋಟಿ ಹಾಗೂ ಪಂಚಾಯಿತಿಗಳ ಇ-ಖಾತಾ ಶುಲ್ಕವನ್ನೂ ಬೇಕಾಬಿಟ್ಟಿ ಹೆಚ್ಚಿಸಿದೆ ಎಂದು ದೂರಿದರು.
ವೃತ್ತಿ ತೆರಿಗೆ ಹಾಗೂ ಸರ್ಕಾರಿ ಆಸ್ಪತ್ರೆಗಳ ಸೇವಾ ಶುಲ್ಕವನ್ನು ಬಿಟ್ಟಿಲ್ಲ. ಹೀಗೆ ವಿವಿಧ ಇಲಾಖೆಗಳ ತೆರಿಗೆ ಮತ್ತು ಶುಲ್ಕಗಳ ಮೂಲಕ ರಾಜ್ಯದ ಜನರಿಂದಲೇ ಸುಮಾರು ₹60 ಸಾವಿರ ಕೋಟಿ ಹೆಚ್ಚುವರಿ ಹಣ ಸಂಗ್ರಹಿಸಿಕೊಳ್ಳುತ್ತಿದೆ. ಇದೆಲ್ಲಾ ಹಣ ಎಲ್ಲಿಗೆ ಹೋಗುತ್ತಿದೆ. ಇತ್ತ ರಾಜ್ಯದ ಅಭಿವೃದ್ಧಿ ನೋಡಿದರೆ ಶೂನ್ಯವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಉಚಿತ ಕೊಡುಗೆಗಳ ಬಗ್ಗೆ ಪ್ರಚಾರ ಮಾಡುವ ರಾಜ್ಯ ಕಾಂಗ್ರೆಸ್ ಸರ್ಕಾರ, ಮತ್ತೊಂದೆಡೆ ಹೀಗೆ ಜನರ ಮೇಲೆ ತೆರಿಗೆ ಮತ್ತು ಶುಲ್ಕಗಳ ಹೊರೆ ಹೇರುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.




















