ಬೆಂಗಳೂರು: ಸ್ಯಾಂಡಲ್ವುಡ್ನ ಜನಪ್ರಿಯ ನಟ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಲಕ್ಷ್ಮಿಪುತ್ರ’ ಸಿನಿಮಾದ “ಐ ಲವ್ ಯೂ ಪರಿಮಳ” ಎಂಬ ಲಿರಿಕಲ್ ವಿಡಿಯೋ ಹಾಡು ಅಧಿಕೃತವಾಗಿ ಬಿಡುಗಡೆಯಾಗಿದೆ. ಪ್ರೇಕ್ಷಕರನ್ನು ಆಕರ್ಷಿಸುವ ಕ್ಯಾಚಿ ಟ್ಯೂನ್ ಹಾಗೂ ಸಾಹಿತ್ಯದಿಂದ ಕೂಡಿರುವ ಈ ರೊಮ್ಯಾಂಟಿಕ್ ಹಾಡಿಗೆ ಖ್ಯಾತ ಗಾಯಕ ನವೀನ್ ಸಜ್ಜು ಧ್ವನಿಯಾಗಿದ್ದು, ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಈ ಟ್ರ್ಯಾಕ್ಗೆ ವಿಶೇಷ ಮೆರುಗು ನೀಡಿದೆ.
ಚಿತ್ರವನ್ನು ‘ಎಪಿ ಅರ್ಜುನ್ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಅನ್ನಪೂರ್ಣ ಎ.ಪಿ. ಅರ್ಜುನ್ ನಿರ್ಮಿಸಿದ್ದು, ರವಿಕಿರಣ್ ಎಂ. ಗೌಡ ಸಹ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ವಿಜಯ್ ಎಸ್. ಸ್ವಾಮಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಎ.ಪಿ. ಅರ್ಜುನ್ ಅವರೇ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆ ಬರೆದಿದ್ದಾರೆ. ಇವರಿಗೆ ಪ್ರಶಾಂತ್ ರಾಜಪ್ಪ ಮತ್ತು ವಿಜಯ್ ಈಶ್ವರ್ ಸಂಭಾಷಣೆಯಲ್ಲಿ ಸಾಥ್ ನೀಡಿದ್ದಾರೆ.
ಈ ಚಿತ್ರದಲ್ಲಿ ಚಿಕ್ಕಣ್ಣ ಅವರಿಗೆ ಜೋಡಿಯಾಗಿ ವಂದಿತಾ ಗೌಡ ಅಭಿನಯಿಸಿದ್ದು, ಹಿರಿಯ ನಟಿ ತಾರಾ ಅನುರಾಧ, ಕುರಿ ಪ್ರತಾಪ್, ಧರ್ಮಣ್ಣ ಕಡೂರು, ಮಿತ್ರ ಹಾಗೂ ಮನು ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಗಿರೀಶ್ ಆರ್. ಗೌಡ ಛಾಯಾಗ್ರಹಣ ಹಾಗೂ ದೀಪು ಎಸ್. ಕುಮಾರ್ ಸಂಕಲನ ನಿರ್ವಹಿಸಿದ್ದಾರೆ. ಭರಪೂರ ಮನರಂಜನೆ ನೀಡಲು ಸಜ್ಜಾಗಿರುವ ‘ಲಕ್ಷ್ಮಿಪುತ್ರ’ ಚಿತ್ರವು ನವೆಂಬರ್ 27ರಂದು ವಿಶ್ವಾದ್ಯಂತ ತೆರೆಕಾಣಲಿದೆ.






















