BBK13: ಬಿಗ್ ಬಾಸ್ ಕನ್ನಡ ಸೀಸನ್-13ರ ಆಟ ಇದೀಗ ಅತ್ಯಂತ ಭಾವನಾತ್ಮಕ ಘಟ್ಟವನ್ನು ತಲುಪಿದೆ. ಕಳೆದ 58 ದಿನಗಳಿಂದ ಕುಟುಂಬದಿಂದ ದೂರವಾಗಿರುವ ಸ್ಪರ್ಧಿಗಳಿಗೆ ಮನೆಯವರಿಂದ ಬರುವ ಪತ್ರಗಳು ಅತ್ಯಂತ ಪ್ರಮುಖವಾಗಿವೆ. ಪ್ರತಿ ಸೀಸನ್ನಂತೆ ಈ ಬಾರಿಯೂ ಪತ್ರ ಪಡೆಯುವ ಟಾಸ್ಕ್ ಸ್ಪರ್ಧಿಗಳ ಕಣ್ಣೀರ ಕೋಡಿಯನ್ನೇ ಹರಿಸುವಂತೆ ಮಾಡಿದೆ.
ಅರ್ಧರಾತ್ರಿ ಸ್ಪರ್ಧಿಗಳು ನಿದ್ರಿಸುತ್ತಿದ್ದ ವೇಳೆ ಬಿಗ್ ಬಾಸ್ ನೀಡಿದ ದಿಢೀರ್ ಆಫರ್ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಯಶಸ್ ಕೃಷ್ಣ ಹಾಗೂ ಗಗನ್ ಚಿನ್ನಪ್ಪ ಅವರಿಗೆ ತಮ್ಮ ಕುಟುಂಬದ ಪತ್ರ ಪಡೆಯಲು ಒಂದು ಅವಕಾಶ ಸಿಕ್ಕಿದ್ದು, ಅದಕ್ಕಾಗಿ ಅವರು ತಮ್ಮ ಪರವಾಗಿ ಆಡಲು ಸಹ-ಸ್ಪರ್ಧಿಗಳನ್ನು ಮನವೋಲಿಸಬೇಕಿತ್ತು. ಯಶಸ್ ಪರವಾಗಿ ಧನುಷ್ ಹಾಗೂ ಗಗನ್ ಪರವಾಗಿ ತಾಂಡವ್ ರಾಮ್ ಈ ಕಠಿಣ ಸವಾಲನ್ನು ಸ್ವೀಕರಿಸಿ ಕಣಕ್ಕಿಳಿದಿದ್ದಾರೆ.
ಈ ಟಾಸ್ಕ್ನ ನಿಯಮದಂತೆ, ಹಿಡಿಕೆ ಇರುವ ಕಂಬಗಳ ಮೇಲೆ ಇಬ್ಬರೂ ಬೆಳಗ್ಗಿನ ವೇಕ್ಅಪ್ ಸಾಂಗ್ ಬರುವವರೆಗೂ ನಿಂತುಕೊಳ್ಳಬೇಕು. ಇಬ್ಬರೂ ಯಶಸ್ವಿಯಾಗಿ ನಿಂತರೆ ಇಬ್ಬರಿಗೂ ಪತ್ರಗಳು ಸಿಗಲಿವೆ. ಅರ್ಧದಲ್ಲೇ ಬಿದ್ದರೆ ಪತ್ರಗಳು ಅವರ ಕಣ್ಣೆದುರೇ ಚೂರು ಚೂರಾಗಲಿವೆ. ಸೈಕ್ಲಿಸ್ಟ್ ಧನುಷ್ ಅವರ ತಾಳ್ಮೆ ಮತ್ತು ಗರಡಿ ಮನೆಯ ಪೈಲ್ವಾನ್ ತಾಂಡವ್ ರಾಮ್ ಅವರ ದೈಹಿಕ ಶಕ್ತಿ ನಡುವೆ ಈಗ ತೀವ್ರ ಪೈಪೋಟಿ ಏರ್ಪಟ್ಟಿದೆ. ಕುಟುಂಬದ ಪ್ರೀತಿ, ಸ್ನೇಹಿತರ ನಂಬಿಕೆ ಮತ್ತು ಶಕ್ತಿಯ ಪರೀಕ್ಷೆಯಾಗಿರುವ ಈ ಟಾಸ್ಕ್ನಲ್ಲಿ ಅಂತಿಮವಾಗಿ ಯಾರು ಗೆಲ್ಲಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.






















