ಖ್ಯಾತ ನಟಿ ಮೌನಿ ರಾಯ್ ತಮ್ಮ ವೈವಾಹಿಕ ಜೀವನದ ಕುರಿತು ಹರಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಉದ್ಯಮಿ ಪತಿ ಸೂರಜ್ ನಂಬಿಯಾರ್ ಮತ್ತು ಅವರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ, ನಟಿ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ಸುಳ್ಳು ವದಂತಿಗಳಿಗೆ ಬ್ರೇಕ್: ಬುಧವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿರುವ ‘ಬ್ರಹ್ಮಾಸ್ತ್ರ’ ಖ್ಯಾತಿಯ ನಟಿ, “ಎಲ್ಲಾ ಮಾಧ್ಯಮ ಸಂಸ್ಥೆಗಳು ಸುಳ್ಳು ನಿರೂಪಣೆಗಳನ್ನು ಪ್ರಕಟಿಸಬೇಡಿ ಎಂದು ವಿನಮ್ರವಾಗಿ ವಿನಂತಿಸುತ್ತಿದ್ದೇನೆ. ಈ ಸಮಯದಲ್ಲಿ ನಮಗೆ ಸ್ವಲ್ಪ ಸಮಯ ಮತ್ತು ಗೌಪ್ಯತೆಯ ಅಗತ್ಯವಿದೆ, ದಯವಿಟ್ಟು ಅದನ್ನು ಗೌರವಿಸಿ,” ಎಂದು ಬರೆದುಕೊಂಡಿದ್ದಾರೆ. ಪ್ರತ್ಯೇಕತೆಯ ವದಂತಿಗಳು ಆನ್‌ಲೈನ್‌ನಲ್ಲಿ ಸದ್ದು ಮಾಡಿದ ಕೇವಲ ಒಂದು ದಿನದ ನಂತರ ನಟಿಯಿಂದ ಈ ಪ್ರತಿಕ್ರಿಯೆ ಬಂದಿದೆ.
ವೈವಾಹಿಕ ಹಿನ್ನೆಲೆ: ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ 2022ರ ಜನವರಿಯಲ್ಲಿ ಗೋವಾದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಬಂಗಾಳಿ ಮತ್ತು ದಕ್ಷಿಣ ಭಾರತದ ಸಂಪ್ರದಾಯದಂತೆ ನಡೆದ ಈ ಮದುವೆ ಆಗ ಸಖತ್ ಸುದ್ದಿಯಾಗಿತ್ತು. ದಂಪತಿಗಳು ಆಗಾಗ್ಗೆ ತಮ್ಮ ಪ್ರವಾಸ ಮತ್ತು ವಿಶೇಷ ಕ್ಷಣಗಳ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದರು.
ನಟನೆಯ ಹಾದಿ: ದೂರದರ್ಶನದ ‘ನಾಗಿನ್’ ಮತ್ತು ‘ಮಹಾದೇವ್’ ಅಂತಹ ಸೂಪರ್ ಹಿಟ್ ಧಾರಾವಾಹಿಗಳ ಮೂಲಕ ಜನಪ್ರಿಯರಾದ ಮೌನಿ, ನಂತರ ಬಾಲಿವುಡ್‌ನ ‘ಗೋಲ್ಡ್’ ಮತ್ತು ‘ಬ್ರಹ್ಮಾಸ್ತ್ರ’ ಚಿತ್ರಗಳಲ್ಲಿ ಗಮನಾರ್ಹ ನಟನೆ ನೀಡಿದ್ದಾರೆ. ಇತ್ತೀಚೆಗೆ ನಟಿ ‘ಟೆಂಪ್ಟೇಶನ್ ಐಲ್ಯಾಂಡ್ ಇಂಡಿಯಾ’ ರಿಯಾಲಿಟಿ ಶೋನ ನಿರೂಪಕಿಯಾಗಿಯೂ ಕಾಣಿಸಿಕೊಂಡಿದ್ದರು.
ಸದ್ಯ ಮೌನಿ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಕೇವಲ ವದಂತಿ ಎಂದು ತಮ್ಮ ಅಧೀಕೃತ ಖಾತೆ ಇನ್ಸ್ಟಾಗ್ರಾಮ್‌ನ ಮೂಲಕ ಸ್ಪಷ್ಟಪಡಿಸಿ, ಸುಳ್ಳು ಸುದ್ದಿಗಾರರಿಗೆ ಬ್ರೇಕ್ ಹಾಕಿದ್ದಾರೆ.























