SK Home Ad
Home ಸಿನಿ ಮಿಲ್ಸ್ ಉಪೇಂದ್ರರಿಂದ ‘ರೊಮ್ಯಾಂಟಿಕ್ ರಾಮು ಲವ್ಲಿ ಸೀತಾ’ ಟೀಸರ್ ರಿಲೀಸ್

ಉಪೇಂದ್ರರಿಂದ ‘ರೊಮ್ಯಾಂಟಿಕ್ ರಾಮು ಲವ್ಲಿ ಸೀತಾ’ ಟೀಸರ್ ರಿಲೀಸ್

0
57

ಬೆಂಗಳೂರು: ಪ್ರೀತಿ, ಬಾಂಧವ್ಯ, ಭಾವನೆಗಳ ಜೊತೆಗೆ ಕುತೂಹಲಕಾರಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ರೊಮ್ಯಾಂಟಿಕ್ ರಾಮು ಲವ್ಲಿ ಸೀತಾ’ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಶೀರ್ಷಿಕೆ ಹಾಗೂ ಕಥಾವಸ್ತುವಿನ ಬಗ್ಗೆ ಉಪೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಪುಣ್ಯಕೋಟಿ’ ಕಥೆಯ ಮೂಲ ಆಶಯದಿಂದ ಪ್ರೇರಣೆ ಪಡೆದಿರುವ ಈ ಸಿನಿಮಾ, ತಂದೆ ಮತ್ತು ಮಗಳ ನಡುವಿನ ನಿಸ್ವಾರ್ಥ ಪ್ರೀತಿ, ಬಾಂಧವ್ಯ ಹಾಗೂ ಭಾವನಾತ್ಮಕ ಪಯಣವನ್ನು ಪ್ರಮುಖವಾಗಿ ಕಟ್ಟಿಕೊಡಲಿದೆ. ಇದರೊಂದಿಗೆ ಯುವ ಪ್ರೇಮಿಗಳ ಪ್ರೀತಿ, ಹಾಸ್ಯ ಹಾಗೂ ರೋಚಕ ಥ್ರಿಲ್ಲರ್ ಅಂಶಗಳೂ ಚಿತ್ರದಲ್ಲಿರಲಿವೆ.

ನಿರ್ದೇಶನದ ಜೊತೆಗೆ ನಾಯಕನಟನಾಗಿಯೂ ಗೌರವ್ ಆರ್ಯನ್: ಚಿತ್ರವನ್ನು ಗೌರವ್ ಆರ್ಯನ್ ನಿರ್ದೇಶಿಸುವುದರ ಜೊತೆಗೆ ನಾಯಕನಟನಾಗಿಯೂ ಅಭಿನಯಿಸಿದ್ದಾರೆ. ಕಿರುತೆರೆಯಲ್ಲಿ ನಟನೆಯ ಮೂಲಕ ವೃತ್ತಿಜೀವನ ಆರಂಭಿಸಿದ ಅವರು, ಬಳಿಕ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕ ಹಾಗೂ ಗೀತರಚನೆಕಾರರಾಗಿ ಕೆಲಸ ಮಾಡಿದ್ದಾರೆ. ಇದೀಗ ‘ರೊಮ್ಯಾಂಟಿಕ್ ರಾಮು ಲವ್ಲಿ ಸೀತಾ’ ಮೂಲಕ ನಿರ್ದೇಶಕ ಮತ್ತು ನಾಯಕ ನಟನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಾಯಕಿಯಾಗಿ ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಸಿಂಚನಾ ಪಿ. ರಾವ್ ಅಭಿನಯಿಸಿದ್ದಾರೆ.

ಬಿಗ್‌ಬಾಸ್ ಖ್ಯಾತಿಯ ವಿನಯ್ ಗೌಡ ಹಾಗೂ ರಂಗಭೂಮಿ ಕಲಾವಿದರೂ ಆಗಿರುವ ಕೂರ್ಗ್ ನ್ಯಾಚುರಲ್ ಸ್ಪೈಸಸ್ ಮಾಲೀಕ ಚೇತನ್ ಎಂ. ಮಾದಾಪುರ ಪ್ರಮುಖ ಖಳನಾಯಕನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜಿಆರ್‌ಎಲ್ ಮೂವೀಸ್‌ನಿಂದ ನಿರ್ಮಾಣ: ಜಿಆರ್‌ಎಲ್ (GRL) ಟ್ರಾವೆಲ್ಸ್ ಮಾಲೀಕ ಗಂಗಾಧರಯ್ಯ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಮೂಲಕ ‘ಜಿಆರ್‌ಎಲ್ ಮೂವೀಸ್’ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಸಂಸ್ಥೆಯಾಗಿ ಗುರುತಿಸಿಕೊಳ್ಳಲು ಮುಂದಾಗಿದೆ. ಕ್ರಿಕೆಟ್ ಕ್ಷೇತ್ರದಲ್ಲಿ ಡಿವಿಷನ್ ಲೀಗ್ ಆಟಗಾರರಾಗಿ ಗುರುತಿಸಿಕೊಂಡಿರುವ ಪ್ರಣಯ್ ಜಿ. ಗೌಡ ಹಾಗೂ ಚೇತನ್ ಎಂ. ಮಾದಾಪುರ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.

ಚಿತ್ರದಲ್ಲಿ ಗೌರವ್ ಆರ್ಯನ್, ಸಿಂಚನಾ ಪಿ. ರಾವ್, ವಿನಯ್ ಗೌಡ, ವಿನೋದ್ ಗೊಬರಗಾಲ, ಜಿ.ಆರ್.ಎಲ್ ಗಂಗಾಧರಯ್ಯ, ರಮೇಶ್ ಭಟ್, ಬಿರಾದಾರ್, ಟೆನ್ನಿಸ್ ಕೃಷ್ಣ, ಮುಬಾರಕ್ ಅಲಿ, ಬೇಬಿ ನಿಧಿ, ಚೇತನ್ ಎಂ. ಮಾದಾಪುರ, ರಾಘವ್ ರಾಮ್, ಫಿರೋಜ್ ಮಾಗರೆ, ಹರ್ಷಿತ ಟಿ.ಎ., ಕೀರ್ತನ ಗೌಡ, ಸುಪ್ರೀತಾ ಪ್ರೇಮ್, ನಾಗರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ.

ನಾಲ್ವರು ಸಂಗೀತ ನಿರ್ದೇಶಕರಿಂದ ನಾಲ್ಕು ಹಾಡು: ಚಿತ್ರಕ್ಕೆ ಸುಧೀರ್ ಶಾಸ್ತ್ರೀ, ಶ್ರೀರಾಮ್ ಗಂಧರ್ವ ಹಾಗೂ ಗೌರವ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಕೆ.ಬಿ. ಪ್ರವೀಣ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಮದನ್ ಹರಿಣಿ ನೃತ್ಯ ನಿರ್ದೇಶನ, ವಿನೋದ್ ಹಾಗೂ ಚಂದ್ರು ಬಂಡೆ ಸಾಹಸ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಸಿದ್ದು ಮೈಸೂರು ಮತ್ತು ಅರುಣ್ ಸುರೇಶ್ ಛಾಯಾಗ್ರಹಣ ಮಾಡಿದ್ದು, ಶಶಾಂಕ್ ನಾರಾಯಣ್ ಸಂಕಲನ ನಿರ್ವಹಿಸಿದ್ದಾರೆ.

ಬೆಂಗಳೂರು ಸೇರಿದಂತೆ ಹಲವು ಕಡೆ ಚಿತ್ರೀಕರಣ: ಬೆಂಗಳೂರು, ತುಮಕೂರು, ಸಕಲೇಶಪುರ ಹಾಗೂ ಮಂಗಳೂರು ಸೇರಿದಂತೆ ಹಲವು ರಮಣೀಯ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.

ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಅಧಿಕೃತ ಪ್ರಚಾರಕ್ಕೆ ಚಾಲನೆ ನೀಡಿದೆ. ಎಲ್ಲವೂ ಯೋಜನೆಯಂತೆ ನಡೆದರೆ 2027ರ ಜನವರಿಯಲ್ಲಿ ‘ರೊಮ್ಯಾಂಟಿಕ್ ರಾಮು ಲವ್ಲಿ ಸೀತಾ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.