SK Home Ad
Home ಸಿನಿ ಮಿಲ್ಸ್ ‘ಬಿಗ್ ಬಾಸ್ ಕನ್ನಡ 13’: ಈ ವಾರ ಪ್ರಶಾಂತ್‌ಗೆ ‘ಕಿಚ್ಚನ ಚಪ್ಪಾಳೆ’ ಸಿಗಲಿ ಎಂದ ವೀಕ್ಷಕರು!

‘ಬಿಗ್ ಬಾಸ್ ಕನ್ನಡ 13’: ಈ ವಾರ ಪ್ರಶಾಂತ್‌ಗೆ ‘ಕಿಚ್ಚನ ಚಪ್ಪಾಳೆ’ ಸಿಗಲಿ ಎಂದ ವೀಕ್ಷಕರು!

0
62

BBK13: ‘ಬಿಗ್ ಬಾಸ್ ಕನ್ನಡ 13’ ರಿಯಾಲಿಟಿ ಶೋನಲ್ಲಿ ದಿನಕ್ಕೊಂದು ಹೊಸ ತಿರುವುಗಳು ಸಿಗುತ್ತಿದ್ದು, ವಾರದ ಕೊನೆಯಲ್ಲಿ ಬರುವ ‘ಕಿಚ್ಚನ ಪಂಚಾಯಿತಿ’ಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿರುತ್ತಾರೆ. ಇಡೀ ವಾರ ಮನೆಯಲ್ಲಿ ಅತ್ಯುತ್ತಮವಾಗಿ ಆಡಿ, ಪ್ರೇಕ್ಷಕರನ್ನು ರಂಜಿಸುವ ಸ್ಪರ್ಧಿಗೆ ನೀಡುವ ‘ಕಿಚ್ಚನ ಚಪ್ಪಾಳೆ’ ಅತ್ಯಂತ ಗೌರವದ ಬಹುಮಾನವಾಗಿದೆ. ಈ ವಾರದ ಪ್ರದರ್ಶನವನ್ನು ಗಮನಿಸಿದರೆ, ಈ ಗೌರವ ಪ್ರಶಾಂತ್‌ಗೆ ಸಿಗಬೇಕು ಎಂಬ ಧ್ವನಿ ಅಭಿಮಾನಿಗಳಿಂದ ಬಲವಾಗಿ ಕೇಳಿಬರುತ್ತಿದೆ.

ದೊಡ್ಮನೆಯಲ್ಲಿ ಇತ್ತೀಚೆಗೆ ನಡೆದ ‘ಶೆಟ್ಟಿ ಡಾನ್’ ಮದುವೆ ಟಾಸ್ಕ್‌ನಲ್ಲಿ ಪ್ರಶಾಂತ್‌ಗೆ ಸೌಂದರ್ಯ ತಾಯಿಯಂತಹ ವಿಭಿನ್ನ ಹಾಗೂ ಸವಾಲಿನ ಸ್ತ್ರೀ ವೇಷ ನೀಡಲಾಗಿತ್ತು. ಇಂತಹ ಪಾತ್ರಗಳನ್ನು ಅನೇಕರು ಮುಜುಗರದಿಂದ ನಿರ್ವಹಿಸುವುದುಂಟು. ಆದ್ರೆ ಪ್ರಶಾಂತ್ ಅದನ್ನು ಅತ್ಯಂತ ಸ್ಪೋರ್ಟಿವ್ ಆಗಿ ಸ್ವೀಕರಿಸಿದರು. ಹೆಣ್ಣಿನ ವೇಷ ಧರಿಸಿ, ಅದಕ್ಕೆ ತಕ್ಕಂತೆ ತಮ್ಮ ನಡವಳಿಕೆ ಹಾಗೂ ಅಭಿನಯದ ಮೂಲಕ ಇಡೀ ಮನೆಯನ್ನು ನಗೆಗಡಲಲ್ಲಿ ತೇಲಿಸಿದರು. ತಮ್ಮ ನೈಜ ಹಾಸ್ಯಪ್ರಜ್ಞೆಯಿಂದ ಪ್ರತಿಯೊಬ್ಬರ ಮನ ಗೆದ್ದರು.

ಇಡೀ ವಾರದ ಮನರಂಜನೆಯ ವಿಚಾರದಲ್ಲಿ ಪ್ರಶಾಂತ್ ಜೊತೆಗೆ ತಾಂಡವ್ ರಾಮ್‌ ಕೂಡ ಉತ್ತಮ ಸ್ಪರ್ಧೆ ನೀಡಿದ್ದಾರೆ. ಇಬ್ಬರೂ ಸೇರಿ ಮನೆಯಲ್ಲಿದ್ದ ಗಂಭೀರ ವಾತಾವರಣವನ್ನು ಹಗುರಗೊಳಿಸಿದರು. ತಾಂಡವ್ ತಮ್ಮದೇ ಶೈಲಿಯಲ್ಲಿ ರಂಜಿಸಿದರೆ, ಪ್ರಶಾಂತ್ ತಮ್ಮ ಅಪರೂಪದ ಸ್ತ್ರೀ ವೇಷ ಮತ್ತು ನಟನೆಯಿಂದ ಗಮನ ಸೆಳೆದರು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಶಾಂತ್ ಈ ನಿಸ್ವಾರ್ಥ ಆಟಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಹಿಂದೆ ತಾಂಡವ್‌ಗೆ ‘ಕಿಚ್ಚನ ಚಪ್ಪಾಳೆ’ ಸಿಕ್ಕಿರುವುದರಿಂದ, ಈ ಬಾರಿ ಭರ್ಜರಿ ಮನರಂಜನೆ ನೀಡಿರುವ ಪ್ರಶಾಂತ್‌ಗೆ ಈ ಗೌರವ ಸಿಗಲೇಬೇಕು ಎನ್ನುವುದು ವೀಕ್ಷಕರ ಬಲವಾದ ಒತ್ತಾಯವಾಗಿದೆ. ಕಿಚ್ಚ ಸುದೀಪ್ ಈ ವಾರ ಯಾರಿಗೆ ಚಪ್ಪಾಳೆ ನೀಡಿ ಪ್ರೋತ್ಸಾಹಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.