SK Home Ad
Home ಸಿನಿ ಮಿಲ್ಸ್ ಧನ್ವೀರ್ ತಂದೆಗೆ ಸಿಸಿಟಿವಿ ಫುಟೇಜ್ ನೀಡಲು ನೋಟಿಸ್; ಖಾಸಗಿ ಮುನಿಸು ಹಾದಿಬೀದಿಗೆ

ಧನ್ವೀರ್ ತಂದೆಗೆ ಸಿಸಿಟಿವಿ ಫುಟೇಜ್ ನೀಡಲು ನೋಟಿಸ್; ಖಾಸಗಿ ಮುನಿಸು ಹಾದಿಬೀದಿಗೆ

0
21

ಬೆಂಗಳೂರು: ನಟ ಧನ್ವೀರ್ ಗೌಡ ಹಾಗೂ ನಟ ದರ್ಶನ್ ಕುಟುಂಬದ ನಡುವಿನ ಸಂಬಂಧ ತೀವ್ರ ಹಸೆಗೆಟ್ಟಿದ್ದು, ಪ್ರಕರಣೀಗ ರಾಜಾಜಿನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ₹10 ಕೋಟಿ ರೂಪಾಯಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಆರಂಭವಾದ ವೈಮನಸ್ಯವು ಇದೀಗ ದೂರು-ಪ್ರತಿದೂರುಗಳಿಗೆ ಕಾರಣವಾಗಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಅವರ ಬೆಂಬಲಿಗರು ತಮ್ಮ ಮನೆಗೆ ಅಕ್ರಮವಾಗಿ ನುಗ್ಗಿ ಗಲಾಟೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಧನ್ವೀರ್ ತಂದೆ ತಿಮ್ಮಗೌಡ ಪೊಲೀಸರಿಗೆ ದೂರು ನೀಡಿದ್ದರು.

ದೂರಿನನ್ವಯ ಆರಂಭದಲ್ಲಿ ಎನ್‌ಸಿಆರ್ (NCR) ದಾಖಲಿಸಿಕೊಂಡಿದ್ದ ರಾಜಾಜಿನಗರ ಪೊಲೀಸರು, ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಒಪ್ಪಿಸುವಂತೆ ತಿಮ್ಮಗೌಡ ಅವರಿಗೆ ನೋಟಿಸ್ ನೀಡಿದ್ದರು. ಆದ್ರೆ ತಿಮ್ಮಗೌಡ ಇದುವರೆಗೆ ಸಿಸಿಟಿವಿ ಫುಟೇಜ್ ನೀಡಲು ವಿಳಂಬ ಮಾಡುತ್ತಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಮತ್ತೊಂದೆಡೆ, ವಿಜಯಲಕ್ಷ್ಮಿ ಅವರೊಂದಿಗೆ ಧನ್ವೀರ್ ಮನೆಗೆ ತೆರಳಿದ್ದ ಬೋಜರಾಜ್ ಎಂಬುವರು, “ನಾವು ಯಾವುದೇ ಗಲಾಟೆ ಮಾಡಿಲ್ಲ, ಧನ್ವೀರ್ ಸಿಸಿಟಿವಿ ದೃಶ್ಯಗಳನ್ನು ಅಳಿಸಿಹಾಕುವ ಸಾಧ್ಯತೆಯಿದ್ದು, ತಕ್ಷಣವೇ ಫುಟೇಜ್ ವಶಕ್ಕೆ ಪಡೆಯಬೇಕು” ಎಂದು ಪ್ರತಿದೂರು ನೀಡಿದ್ದಾರೆ.

ಈ ಬೆಳವಣಿಗೆ ಬೆನ್ನಲ್ಲೇ, ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲು ಪೊಲೀಸರು ನ್ಯಾಯಾಲಯದ ಮೊರೆ ಹೋಗಿದ್ದು, ಎನ್‌ಸಿಆರ್ ನ್ನು ಎಫ್‌ಐಆರ್ ಆಗಿ ಬದಲಿಸಲು ಅನುಮತಿ ಕೋರಿದ್ದಾರೆ. ಈಗಾಗಲೇ ದರ್ಶನ್ ಅವರು ಧನ್ವೀರ್ ವಿರುದ್ಧ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆ ತಂದಿದ್ದು, ಬಹಿರಂಗ ಹೇಳಿಕೆ ನೀಡದಂತೆ ತಡೆದಿದ್ದಾರೆ. ವಿಜಯಲಕ್ಷ್ಮಿ ಅವರ ಆಪ್ತರು ನೀಡಿದ ದೂರಿನ ಮೇರೆಗೆ ಧನ್ವೀರ್ ವಿರುದ್ಧ ಈಗಾಗಲೇ ಎರಡು ಎಫ್‌ಐಆರ್ ದಾಖಲಾಗಿದ್ದು, ನಟ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಸಿಟಿವಿ ದೃಶ್ಯಗಳು ಪೊಲೀಸರ ಕೈ ಸೇರಿದರೆಷ್ಟೇ ಘಟನೆಯ ನೈಜ ಸತ್ಯಾಂಶ ಹೊರಬರಲಿದೆ.