ಶಿರಸಿ: ಉತ್ತರ ಕನ್ನಡ ಜಿಲ್ಲೆಯ ನದಿ ತಿರುವು ಯೋಜನೆಯನ್ನು ವಿರೋಧಿಸಿ ಶಿರಸಿ ತಾಲೂಕಿನ ಭೈರುಂಬೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಪತ್ರ ಚಳವಳಿ ಆರಂಭಿಸಿದ್ದಾರೆ.
ಅಕ್ಟೋಬರ್ 31ರಂದು ಆರಂಭಗೊಂಡ ಈ ಚಳವಳಿಯಲ್ಲಿ 200ಕ್ಕೂ ಹೆಚ್ಚು ಪತ್ರಗಳನ್ನು ಅಂಚೆ ಮೂಲಕ ರವಾನಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕನ್ನಡದಲ್ಲಿ ಪತ್ರಗಳನ್ನು ಕಳುಹಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪತ್ರ ಬರೆದು, ನದಿ ತಿರುವು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ನದಿಗಳನ್ನು ತಿರುಗಿಸುವ ಯೋಜನೆಯಿಂದ ಜಿಲ್ಲೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಕಳವಳ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, ಯೋಜನೆಯನ್ನು ವಿರೋಧಿಸಿ ತಮ್ಮ ಅಭಿಪ್ರಾಯವನ್ನು ಪತ್ರಗಳ ಮೂಲಕ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.

ಈ ಪತ್ರ ಚಳವಳಿಗೆ ಭಾರತೀಯ ಕಿಸಾನ್ ಸಂಘದ ಸಂಚಾಲಕ ನರಸಿಂಹಮೂರ್ತಿ ಸಹಕಾರ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನರಸಿಂಹಮೂರ್ತಿ, ಜಿಲ್ಲೆಯ ಎಲ್ಲ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಇದೇ ಮಾದರಿಯಲ್ಲಿ ನದಿ ತಿರುವು ಯೋಜನೆ ವಿರೋಧಿಸಿ ಪತ್ರ ಚಳವಳಿ ನಡೆಸಲು ಆಸಕ್ತಿ ತೋರಿದರೆ ಅಗತ್ಯ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಆರಂಭಿಸಿರುವ ಈ ಪತ್ರ ಚಳವಳಿ ಜಿಲ್ಲೆಯ ನದಿ ಹಾಗೂ ಪರಿಸರ ಸಂರಕ್ಷಣೆಯ ಕುರಿತ ಚರ್ಚೆಗೆ ಮತ್ತಷ್ಟು ಗಮನ ಸೆಳೆದಿದೆ.





















