SK Home Ad
Home ಸುದ್ದಿ ದೇಶ ಕಾಶ್ಮೀರ ಸಿಎಂಗೆ ಎರಡನೇ ಮದುವೆ: ಪತ್ರಕರ್ತೆ ನಿಧಿ ರಾಜ್ದಾನ್ ಕೈಹಿಡಿದ ಒಮರ್ ಅಬ್ದುಲ್ಲಾ

ಕಾಶ್ಮೀರ ಸಿಎಂಗೆ ಎರಡನೇ ಮದುವೆ: ಪತ್ರಕರ್ತೆ ನಿಧಿ ರಾಜ್ದಾನ್ ಕೈಹಿಡಿದ ಒಮರ್ ಅಬ್ದುಲ್ಲಾ

0
119

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ವೈಯಕ್ತಿಕ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಖ್ಯಾತ ಪತ್ರಕರ್ತೆ ನಿಧಿ ರಾಜ್ದಾನ್ ಅವರೊಂದಿಗೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ವಿವಾಹದ ವಿಚಾರವನ್ನು ಸ್ವತಃ ಒಮರ್ ಅಬ್ದುಲ್ಲಾ ಅವರೇ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದಾರೆ.

ಶನಿವಾರ ಇನ್‌ಸ್ಟಾಗ್ರಾಮ್‌ನಲ್ಲಿ ನಿಧಿ ರಾಜ್ದಾನ್ ಅವರೊಂದಿಗಿನ ಫೋಟೋ ಹಂಚಿಕೊಂಡಿರುವ ಒಮರ್ ಅಬ್ದುಲ್ಲಾ, ʻನಿನ್ನೆ ನಮ್ಮ ಜೀವನದ ಹೊಸ ಪಯಣ ಆರಂಭವಾಗಿದೆ’ ಎಂಬ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಅಲ್ಲದೆ, ತಮ್ಮ ಪತ್ನಿ ನಿಧಿ ಅವರನ್ನು ಟ್ಯಾಗ್ ಮಾಡುವ ಮೂಲಕ ಮದುವೆಯ ಸಂತಸದ ಸುದ್ದಿಯನ್ನು ಅಭಿಮಾನಿಗಳು ಹಾಗೂ ಹಿತೈಷಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಒಮರ್ ಅಬ್ದುಲ್ಲಾ ಅವರ ಮೊದಲ ವಿವಾಹ ವಿಚ್ಛೇದನದ ಮೂಲಕ ಅಂತ್ಯಗೊಂಡ ಬೆನ್ನಲ್ಲೇ ಈ ಹೊಸ ಬೆಳವಣಿಗೆ ನಡೆದಿದೆ. ಮೊದಲ ಪತ್ನಿ ಪಾಯಲ್ ಅಬ್ದುಲ್ಲಾ ಅವರೊಂದಿಗಿನ ವಿಚ್ಛೇದನಕ್ಕೆ ಸುಪ್ರೀಂ ಕೋರ್ಟ್ ಮೂರು ತಿಂಗಳ ಹಿಂದಷ್ಟೇ ಅನುಮತಿ ನೀಡಿತ್ತು. 2026ರ ಜುಲೈ 31ರಂದು ಸಂವಿಧಾನದ 142ನೇ ವಿಧಿಯ ಅಧಿಕಾರ ಬಳಸಿ, ಇಬ್ಬರ ಪರಸ್ಪರ ಸಮ್ಮತಿಯ ಆಧಾರದ ಮೇಲೆ ವಿಚ್ಛೇದನಕ್ಕೆ ನ್ಯಾಯಾಲಯ ಒಪ್ಪಿಗೆ ಸೂಚಿಸಿತ್ತು.

1994ರಲ್ಲಿ ದೆಹಲಿಯ ಒಬೆರಾಯ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಒಮರ್ ಮತ್ತು ಪಾಯಲ್ ಅವರ ಪರಿಚಯವಾಗಿತ್ತು. ಬಳಿಕ ಇಬ್ಬರೂ ವಿವಾಹವಾಗಿದ್ದರು. ಈ ದಂಪತಿಗೆ ಜಾಹಿರ್ ಮತ್ತು ಜಮೀರ್ ಎಂಬ ಇಬ್ಬರು ಪುತ್ರರಿದ್ದಾರೆ.

ಆದರೆ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಉಂಟಾದ ಹಿನ್ನೆಲೆಯಲ್ಲಿ 2009ರಿಂದಲೇ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. 2011ರಲ್ಲಿ ತಮ್ಮ ಪ್ರತ್ಯೇಕತೆಯ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದರು. ಇದೀಗ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಒಮರ್ ಅಬ್ದುಲ್ಲಾ ಎರಡನೇ ವಿವಾಹವಾಗಿದ್ದು, ಅವರ ಹೊಸ ಬದುಕಿನ ಆರಂಭದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.