SK Home Ad
Home ನಮ್ಮ ಜಿಲ್ಲೆ ಯಾದಗಿರಿ ಯಾದಗಿರಿಯಲ್ಲಿ ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಸರ್ವರ್ ಕಾಟ: ರಾತ್ರಿ 10ರವರೆಗೂ ಕಾದರೂ ಕೆಲಸ ಆಗುತ್ತಿಲ್ಲ!

ಯಾದಗಿರಿಯಲ್ಲಿ ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಸರ್ವರ್ ಕಾಟ: ರಾತ್ರಿ 10ರವರೆಗೂ ಕಾದರೂ ಕೆಲಸ ಆಗುತ್ತಿಲ್ಲ!

0
48
ಯಾದಗಿರಿ ಜಿಲ್ಲೆಯ ನ್ಯಾಯಬೆಲೆ ಅಂಗಡಿಯೊಂದರ ಮುಂದೆ ರಾತ್ರಿ ವೇಳೆಯೂ ಇ-ಕೆವೈಸಿ ಮಾಡಿಸಿಕೊಳ್ಳಲು ಪಡಿತರದಾರರು ಕಾಯುತ್ತಿರುವ ದೃಶ್ಯ.

ಯಾದಗಿರಿ: ರೇಷನ್‌ ಕಾರ್ಡ್‌ ಹೊಂದಿರುವ ಪ್ರತಿಯೊಬ್ಬ ಸದಸ್ಯರಿಗೂ ಕಡ್ಡಾಯವಾಗಿರುವ ಇ-ಕೆವೈಸಿ ಪ್ರಕ್ರಿಯೆಗೆ ಸರ್ವರ್‌ ಸಮಸ್ಯೆ ಅಡ್ಡಿಯಾಗಿದ್ದು, ಯಾದಗಿರಿ ಜಿಲ್ಲೆಯ ಪಡಿತರದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳಗ್ಗೆಯೇ ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತರೂ, ಸರ್ವರ್‌ ನಿಧಾನಗತಿ ಹಾಗೂ ತಾಂತ್ರಿಕ ದೋಷದಿಂದ ಇ-ಕೆವೈಸಿ ಪೂರ್ಣಗೊಳ್ಳದೆ ಜನರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲವು ನ್ಯಾಯಬೆಲೆ ಅಂಗಡಿಗಳ ಮುಂದೆ ರಾತ್ರಿ 10 ಗಂಟೆಯವರೆಗೂ ಕಾದರೂ ಪ್ರಕ್ರಿಯೆ ಪೂರ್ಣವಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಇದರ ಪರಿಣಾಮ ದೂರದ ಊರುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಒಂದು ದಿನ ರಜೆ ಪಡೆದು ಸ್ವಗ್ರಾಮಕ್ಕೆ ಬಂದರೂ ಕೆಲಸ ಮುಗಿಸಿಕೊಳ್ಳಲಾಗದೆ ಮತ್ತೆ ರಜೆ ಪಡೆದು ಬರಬೇಕಾದ ಪರಿಸ್ಥಿತಿ ಎದುರಾಗಿದೆ.

ಸ್ಥಳೀಯ ವಿದ್ಯಾರ್ಥಿಗಳಿಗೂ ಸಮಸ್ಯೆ ತಪ್ಪಿಲ್ಲ. ಶಾಲೆ–ಕಾಲೇಜುಗಳ ಸಮಯದಲ್ಲಿ ಇ-ಕೆವೈಸಿಗಾಗಿ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿರುವುದರಿಂದ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ದೂರದ ಊರುಗಳಿಂದ ಬರುವವರಿಗೆ ಪ್ರಯಾಣದ ಖರ್ಚು ಹಾಗೂ ಸಮಯದ ಹೊರೆ ಹೆಚ್ಚಾಗಿದೆ.

ಇತ್ತ ಉತ್ತರ ಕರ್ನಾಟಕದಲ್ಲಿ ಕೃಷಿ ಚಟುವಟಿಕೆಗಳು ಚುರುಕಾಗಿರುವ ಸಮಯ. ಕಳೆ ತೆಗೆಯುವುದು, ಔಷಧ ಸಿಂಪಡಣೆ, ಗೊಬ್ಬರ ಹಾಕುವುದು ಸೇರಿದಂತೆ ವಿವಿಧ ಕೃಷಿ ಕೆಲಸಗಳಲ್ಲಿ ತೊಡಗಿರುವ ರೈತರು ಮತ್ತು ಕೂಲಿ ಕಾರ್ಮಿಕರು ಇ-ಕೆವೈಸಿಗಾಗಿ ಕೆಲಸ ಬಿಟ್ಟು ನ್ಯಾಯಬೆಲೆ ಅಂಗಡಿಗಳಿಗೆ ಬರಬೇಕಾಗಿದೆ. ಹೀಗಾಗಿ ಕೆಲವರಿಗೆ ಒಂದು ದಿನದ ದುಡಿಮೆಯೂ ಕೈತಪ್ಪುತ್ತಿದೆ.

ಇ-ಕೆವೈಸಿ ಪ್ರಕ್ರಿಯೆಯನ್ನು ಮೊದಲೇ ಪೂರ್ಣಗೊಳಿಸಲು ಅವಕಾಶವಿದ್ದರೂ, ಈಗ ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮುಂದೆ ಜನದಟ್ಟಣೆ ಹೆಚ್ಚಾಗಿದೆ. ರಾಜ್ಯದಲ್ಲಿ ಸೆಪ್ಟೆಂಬರ್ 30, 2026ರೊಳಗೆ ಇ-ಕೆವೈಸಿ ಪೂರ್ಣಗೊಳಿಸುವಂತೆ ಆಹಾರ ಇಲಾಖೆ ಸೂಚಿಸಿದೆ.

ಈ ಹಿಂದೆ ಸರ್ವರ್‌ ಸಮಸ್ಯೆ ಹಾಗೂ ಪಡಿತರ ವಿತರಣೆ ಏಕಕಾಲದಲ್ಲಿ ನಡೆಯುತ್ತಿದ್ದ ಕಾರಣ ಉಂಟಾದ ತಾಂತ್ರಿಕ ತೊಂದರೆಯಿಂದ ಇ-ಕೆವೈಸಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಸೆಪ್ಟೆಂಬರ್ 1ರಿಂದ ಪುನರಾರಂಭಿಸಲು ಸೂಚಿಸಲಾಗಿತ್ತು. ಆದರೆ ಪ್ರಕ್ರಿಯೆ ಮತ್ತೆ ಆರಂಭವಾದ ಬಳಿಕವೂ ಕೆಲವು ಜಿಲ್ಲೆಗಳಲ್ಲಿ ಸರ್ವರ್‌ ಸಮಸ್ಯೆ ಮುಂದುವರಿದಿರುವ ವರದಿಗಳು ಬಂದಿವೆ.

‘ಗಡುವಿನೊಳಗೆ ಇ-ಕೆವೈಸಿ ಆಗದಿದ್ದರೆ ಏನಾಗಲಿದೆ?’ ಎಂಬ ಆತಂಕವೂ ಪಡಿತರದಾರರಲ್ಲಿ ಹೆಚ್ಚಾಗಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಧಿಕಾರಿಗಳು ಇ-ಕೆವೈಸಿ ಪೂರ್ಣಗೊಳಿಸುವಂತೆ ಫಲಾನುಭವಿಗಳಿಗೆ ಮನವಿ ಮಾಡುತ್ತಿದ್ದಾರೆ.

ಆದರೆ ಸರ್ವರ್‌ ಸಮಸ್ಯೆಯಿಂದಲೇ ಜನರು ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿರುವುದರಿಂದ, ಸಮಸ್ಯೆಗೆ ತಾಂತ್ರಿಕ ಪರಿಹಾರ ಕಂಡುಕೊಂಡು ಇ-ಕೆವೈಸಿ ಪ್ರಕ್ರಿಯೆಯನ್ನು ವೇಗಗೊಳಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

‘ಇದು ನಮ್ಮ ಜಿಲ್ಲೆಯೊಂದರ ಸಮಸ್ಯೆಯಲ್ಲ’ : ಯಾದಗಿರಿ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಸೋಮಶೇಖರ್ ಬಿರಾದಾರ ಅವರು, “ಇದು ನಮ್ಮ ಜಿಲ್ಲೆಯೊಂದರ ಸಮಸ್ಯೆಯಲ್ಲ. ರಾಜ್ಯಾದ್ಯಂತ ಸರ್ವರ್‌ ತೊಡಕು ಉಂಟಾಗಿದೆ. ಈ ಬಗ್ಗೆ ರಾಜ್ಯದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರ ಪರಿಹಾರ ದೊರೆಯಲಿದೆ” ಎಂದು ತಿಳಿಸಿದ್ದಾರೆ.

ಇ-ಕೆವೈಸಿಗಾಗಿ ಬಂದ ವಿದ್ಯಾರ್ಥಿನಿಯೊಬ್ಬರು, “ಉಡುಪಿಯಿಂದ ಒಂದು ದಿನ ರಜೆ ಪಡೆದು ಬಂದಿದ್ದೇನೆ. ಆದರೆ ಸರ್ವರ್ ಸಮಸ್ಯೆಯಿಂದ ಇ-ಕೆವೈಸಿ ಆಗುತ್ತಿಲ್ಲ. ಮತ್ತೆ ರಜೆ ಪಡೆದು ಬರಬೇಕಾದ ಪರಿಸ್ಥಿತಿ ಬಂದಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.

ಪಡಿತರದಾರರ ಒತ್ತಾಯ : ಸರ್ವರ್‌ ಸಮಸ್ಯೆಯನ್ನು ತಕ್ಷಣ ಪರಿಹರಿಸಿ, ಇ-ಕೆವೈಸಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು. ದಿನವಿಡೀ ಸರದಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿಗೆ ಅಂತ್ಯ ಹಾಡಬೇಕು. ವಿದ್ಯಾರ್ಥಿಗಳು, ರೈತರು ಮತ್ತು ಕೂಲಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಗಡುವಿನೊಳಗೆ ಎಲ್ಲರ ಇ-ಕೆವೈಸಿ ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಪಡಿತರದಾರರ ಒತ್ತಾಯವಾಗಿದೆ.