ಸಂ.ಕ.ಸಮಾಚಾರ ಕಲಬುರಗಿ: ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಕೀಯ ಅಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ. ಇದರ ಭಾಗವಾಗಿ ಕಲಬುರಗಿ ನಗರದಲ್ಲಿ ಸಿಐಡಿ (CID) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಪಶುವೈದ್ಯಕೀಯ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿ ಮಮಿತಾ ಎಂಬುವವರಿಗೆ ಸೇರಿದ ನಗರದ ಪ್ರತಿಷ್ಠಿತ ನ್ಯೂ ಓಜಾ ಲೇಔಟ್‌ನಲ್ಲಿರುವ ಮಮಿತಾ ಅವರ ನಿವಾಸದಲ್ಲಿ ಈ ಶೋಧ ಕಾರ್ಯ ನಡೆಯುತ್ತಿದೆ. ಬೆಂಗಳೂರಿನ ಸಿಐಡಿ ಡಿವೈಎಸ್ಪಿ ಹಾಗೂ ಕಲಬುರಗಿ ಡಿವೈಎಸ್ಪಿ ಅಸ್ಲಾಂ ಪಾಷಾ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳ ತಂಡವು ಏಕಕಾಲದಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.
ಕೆಪಿಎಸ್‌ಸಿ ಸದಸ್ಯೆಯಾಗಿದ್ದ ಶಾಂತಾ ಹೊಸಮನಿ ಅವರ ಮೂಲಕ ಆರ್ಥಿಕ ಡೀಲ್ ಕುದುರಿಸಿಕೊಂಡು, ಯಾವುದೇ ಅರ್ಹತಾ ಮಾನದಂಡ ಹಾಗೂ ಪಾರದರ್ಶಕತೆ ಇಲ್ಲದೆ ಮಮಿತಾ ಹುದ್ದೆ ಪಡೆದಿದ್ದಾರೆ ಎಂಬ ಗಂಭೀರ ಆರೋಪವಿದೆ.
ಹಿನ್ನೆಲೆ ಏನು? : ಪಶುವೈದ್ಯಕೀಯ ಅಧಿಕಾರಿಗಳ ನೇಮಕಾತಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಒಎಂಆರ್ ಉತ್ತರ ಪತ್ರಿಕೆಗಳ ತಿರುಚುವಿಕೆ ಹಾಗೂ ಅಂಕಗಳ ಮೌಲ್ಯಮಾಪನದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವುದು ತನಿಖೆಯಿಂದ ಬಯಲಾಗಿದೆ.
ಈ ಹಗರಣದಲ್ಲಿ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರ ಪಾತ್ರವಿರುವ ಶಂಕೆ ವ್ಯಕ್ತವಾಗಿದ್ದು, ಸಿಐಡಿ ಅಧಿಕಾರಿಗಳು ತಲೆಮರೆಸಿಕೊಂಡಿರುವ ಅವರ ಪತ್ತೆಗಾಗಿ ಮತ್ತು ಅಕ್ರಮದ ಜಾಲವನ್ನು ಬೇಧಿಸಲು ರಾಜ್ಯಾದ್ಯಂತ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಪ್ರಸ್ತುತ ಕಲಬುರಗಿಯಲ್ಲಿ ನಡೆದಿರುವ ಈ ದಾಳಿಯಿಂದ ಪಶುವೈದ್ಯಕೀಯ ನೇಮಕಾತಿ ಆಕಾಂಕ್ಷಿಗಳು ಹಾಗೂ ವಲಯದಲ್ಲಿ ತೀವ್ರ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.





















