SK Home Ad
Home ನಮ್ಮ ಜಿಲ್ಲೆ ಯಾದಗಿರಿ ಯಾದಗಿರಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ತೀವ್ರ ಶೋಧ

ಯಾದಗಿರಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ತೀವ್ರ ಶೋಧ

0
47

ಯಾದಗಿರಿ: ಜಿಲ್ಲೆಯ ಮುದ್ನಾಳ್ ಕ್ರಾಸ್ ಸಮೀಪವಿರುವ ಜಿಲ್ಲಾ ನ್ಯಾಯಾಲಯಕ್ಕೆ ಗುರುವಾರ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ನ್ಯಾಯಾಲಯದ ಅಧಿಕೃತ ಇ-ಮೇಲ್ ವಿಳಾಸಕ್ಕೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಸಂದೇಶ ಬಂದ ತಕ್ಷಣ ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರು ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಲಯದ ಕಟ್ಟಡದಿಂದ ಹೊರಬಂದರು.

ಮಾಹಿತಿ ತಿಳಿಯುತ್ತಿದ್ದಂತೆ ಯಾದಗಿರಿ ಪೊಲೀಸರು, ಬಾಂಬ್ ಪತ್ತೆ ದಳ (Bomb Detection Squad) ಹಾಗೂ ಶ್ವಾನ ದಳ (Dog Squad) ಸ್ಥಳಕ್ಕೆ ಧಾವಿಸಿ ನ್ಯಾಯಾಲಯದ ಕಟ್ಟಡ ಮತ್ತು ಆವರಣದ ವಿವಿಧ ಭಾಗಗಳಲ್ಲಿ ತೀವ್ರ ಶೋಧ ಕಾರ್ಯ ನಡೆಸಿದರು. ವಾಹನ ನಿಲುಗಡೆ ಪ್ರದೇಶ, ನ್ಯಾಯಾಲಯದ ಕೊಠಡಿಗಳು ಹಾಗೂ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿಯೂ ಪರಿಶೀಲನೆ ನಡೆಸಲಾಯಿತು.

ಇದನ್ನೂ ಓದಿ: ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ: ಚಿಕ್ಕಮಗಳೂರು, ಮೈಸೂರು ಕೋರ್ಟ್‌ಗಳಲ್ಲಿ ತೀವ್ರ ಪರಿಶೀಲನೆ

ಪೊಲೀಸ್ ಮೂಲಗಳ ಪ್ರಕಾರ, “ಜಮೀಶಾ ಮುಬೀನ್” ಎಂಬ ಹೆಸರಿನ ಮೇಲ್ ಐಡಿಯಿಂದ ಈ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಇ-ಮೇಲ್‌ನಲ್ಲಿ “ಇಂದು ಮಧ್ಯಾಹ್ನ 1.20ರಿಂದ 3 ಗಂಟೆಯೊಳಗೆ ನ್ಯಾಯಾಲಯದಲ್ಲಿ 13 ವಿಷ ಅನಿಲ ಹಾಗೂ RDX ಬಾಂಬ್‌ಗಳು ಸ್ಫೋಟಗೊಳ್ಳಲಿವೆ. ನ್ಯಾಯಾಧೀಶರು ಮತ್ತು ಸಾರ್ವಜನಿಕರನ್ನು ತಕ್ಷಣ ಸ್ಥಳಾಂತರಿಸಿ” ಎಂದು ಉಲ್ಲೇಖಿಸಲಾಗಿತ್ತು.

ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಪೊಲೀಸರು ಕಟ್ಟುನಿಟ್ಟಿನ ಭದ್ರತಾ ಕ್ರಮ ಕೈಗೊಂಡರು. ಹಲವು ಗಂಟೆಗಳ ಕಾಲ ನಡೆದ ಪರಿಶೀಲನೆಯಲ್ಲಿ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಹೀಗಾಗಿ ಇದು ಹುಸಿ ಬಾಂಬ್ ಬೆದರಿಕೆ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಕಲ್ಲು ಕ್ವಾರಿ ದುರಂತ – ಬಂಡೆ ಕುಸಿದು 7 ಕಾರ್ಮಿಕರ ಸಾವು

ಈ ಘಟನೆ ರಾಜ್ಯದ ವಿವಿಧ ಜಿಲ್ಲಾ ನ್ಯಾಯಾಲಯಗಳಿಗೆ ಇತ್ತೀಚೆಗೆ ಬರುತ್ತಿರುವ ಸರಣಿ ಬೆದರಿಕೆ ಇ-ಮೇಲ್‌ಗಳ ಭಾಗವೇ ಎಂಬ ಅನುಮಾನ ವ್ಯಕ್ತವಾಗಿದ್ದು, ಇ-ಮೇಲ್‌ನ ಮೂಲವನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನ್ಯಾಯಾಲಯದ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.