ಯಾದಗಿರಿ: ಜಿಲ್ಲೆಯ ಬಾಡಿಯಾಳ–ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ರಾಸಾಯನಿಕ ಸೋರಿಕೆ ದುರಂತ ಮೂರು ಕಾರ್ಮಿಕರ ಜೀವ ಬಲಿ ಪಡೆದಿದ್ದು, ಇನ್ನಿಬ್ಬರು ಅಸ್ವಸ್ಥಗೊಂಡಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಕೈಗಾರಿಕಾ ಸುರಕ್ಷತೆ ಕುರಿತು ಮತ್ತೊಮ್ಮೆ ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದ ಈ ಅವಘಡದಿಂದ ಇಡೀ ಪ್ರದೇಶದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.
ಮಾಹಿತಿಯ ಪ್ರಕಾರ, ಕೈಗಾರಿಕೆಯಲ್ಲಿ ಕಾರ್ಮಿಕರು ತಮ್ಮ ನಿತ್ಯದ ಕೆಲಸದಲ್ಲಿ ನಿರತರಾಗಿದ್ದ ವೇಳೆ ಏಕಾಏಕಿ ವಿಷಕಾರಿ ಅನಿಲ ಸೋರಿಕೆಯಾಗಿದೆ ಎನ್ನಲಾಗಿದೆ. ಅನಿಲದ ಪ್ರಭಾವದಿಂದ ಕೆಲವೇ ಕ್ಷಣಗಳಲ್ಲಿ ಹಲವು ಕಾರ್ಮಿಕರು ಉಸಿರಾಟದ ತೊಂದರೆಗೆ ಒಳಗಾಗಿ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲಿದ್ದ ಸಹೋದ್ಯೋಗಿಗಳು ಹಾಗೂ ಸಿಬ್ಬಂದಿ ಕೂಡಲೇ ರಕ್ಷಣಾ ಕಾರ್ಯ ಆರಂಭಿಸಿ, ಅಸ್ವಸ್ಥಗೊಂಡ ಕಾರ್ಮಿಕರನ್ನು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮೂವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ನೆರೆಯ ತೆಲಂಗಾಣ ರಾಜ್ಯದ ಮಹಬೂಬ್‌ನಗರ ಜಿಲ್ಲೆಯ ಆಲಂಪಳ್ಳಿ ಗ್ರಾಮದ ಕಟ್ಲಾ ಗಣೇಶ್ , ಮಧ್ಯೆ ಪ್ರದೇಶ ರಾಜ್ಯದ ವಿಕ್ರಮ್ ಸಿಂಗ್ ಗೋಂಡ, ಸಂಜಯ್ ಸಿಂಗ್ ಗೋಂಡ ಮೃತಪಟ್ಟ ಕಾರ್ಮಿಕರು ಎಂದು ಗುರುತಿಸಲಾಗಿದೆ.
ಮಂಚಾಲ ಹೆಮಂತ್, ಮಂಚಾಲ ಶಿವಕುಮಾರ್ ಗಂಭೀರವಾಗಿ ಗಾಯಗೊಂಡಿರುವುರಾಗಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಎಸ್ಪಿ ಪೃಥ್ವಿಕ್ ಶಂಕರ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೈಗಾರಿಕೆಯೊಳಗಿನ ಪರಿಸ್ಥಿತಿ, ಸುರಕ್ಷತಾ ಕ್ರಮಗಳು ಹಾಗೂ ಅನಿಲ ಸೋರಿಕೆಗೆ ಕಾರಣವಾದ ಅಂಶಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಪ್ರಾಥಮಿಕ ಹಂತದಲ್ಲಿ ರಾಸಾಯನಿಕ ಸೋರಿಕೆಗೆ ನಿಖರ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ತಾಂತ್ರಿಕ ತಜ್ಞರ ಸಹಾಯದಿಂದ ತನಿಖೆ ನಡೆಸಲಾಗುತ್ತಿದ್ದು, ಸುರಕ್ಷತಾ ನಿಯಮಗಳಲ್ಲಿ ಯಾವುದೇ ಲೋಪ ಉಂಟಾಗಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
(ಮಾಹಿತಿ ಅಪ್ಡೇಟ್ ಆಗಲಿದೆ)






















