SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಓಲಾ, ಊಬರ್ ಸವಾರರಿಗೂ ಬಿಎಂಟಿಸಿ ಲೈವ್ ಟ್ರ‍್ಯಾಕಿಂಗ್ ಸೌಲಭ್ಯ

ಓಲಾ, ಊಬರ್ ಸವಾರರಿಗೂ ಬಿಎಂಟಿಸಿ ಲೈವ್ ಟ್ರ‍್ಯಾಕಿಂಗ್ ಸೌಲಭ್ಯ

0
13

ರಾಜಧಾನಿಯ ಸಾರ್ವಜನಿಕ ಸಾರಿಗೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸಲು ಸಾರಿಗೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಓಲಾ ಮತ್ತು ಊಬರ್ ಅಪ್ಲಿಕೇಶನ್ ಬಳಸುವವರಿಗೂ ‘ನಮ್ಮ ಬಿಎಂಟಿಸಿ’ ಲೈವ್ ಟ್ರ್ಯಾಕಿಂಗ್ ಸೌಲಭ್ಯ ಲಭ್ಯವಾಗಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, “ಕ್ಯಾಬ್ ಅಥವಾ ಆಟೋಗಳಲ್ಲಿ ಪ್ರಯಾಣಿಸುವವರು ತಾವು ಇಳಿಯುವ ಸ್ಥಳದಿಂದ ಮುಂದೆ ಹೋಗಲು ಬಿಎಂಟಿಸಿ ಬಸ್‌ಗಳ ಸಮಯ ಮತ್ತು ಸಂಚಾರದ ಲೈವ್ ಮಾಹಿತಿಯನ್ನು ಸುಲಭವಾಗಿ ಪಡೆಯಲು ಈ ಹೊಸ ವ್ಯವಸ್ಥೆ ಸಹಕಾರಿಯಾಗಲಿದೆ” ಎಂದರು. ಇದಕ್ಕಾಗಿ ‘ನಮ್ಮ ಬಿಎಂಟಿಸಿ ಮೊಬೈಲ್ ಆಪ್ 2.0’ ಅನ್ನು ಆ್ಯಪ್ ಆಧಾರಿತ ವಾಹನಗಳಿಗೂ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಕೇಂದ್ರ ಸರ್ಕಾರದ ಪಿಎಂ ಇ-ಡ್ರೈವ್ ಯೋಜನೆಯಡಿ ಒಟ್ಟು 4,500 ಎಲೆಕ್ಟ್ರಿಕ್ ಬಸ್‌ಗಳು ಬಿಎಂಟಿಸಿಗೆ ಬರಲಿವೆ. ಇದರಲ್ಲಿ 200 ಹವಾನಿಯಂತ್ರಿತ (AC) ಮಿನಿ ಬಸ್‌ಗಳನ್ನು ಮೆಟ್ರೋ ನಿಲ್ದಾಣಗಳ ಸಂಪರ್ಕಕ್ಕಾಗಿ ಮೀಸಲಿಡಲಾಗುವುದು. ಈ ಬಸ್‌ಗಳು ನಿಲ್ದಾಣದ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸಲಿದ್ದು, ಬಡಾವಣೆಗಳ ಕಟ್ಟಕಡೆಯ ಸ್ಥಳದಿಂದಲೂ ಮೆಟ್ರೋಗೆ ಸುಲಭ ಕನೆಕ್ಟಿವಿಟಿ ಒದಗಿಸಲಿವೆ.

ಜೊತೆಗೆ, ಐಟಿ-ಬಿಟಿ ಕಂಪನಿಗಳ ಸಿಬ್ಬಂದಿ ಖಾಸಗಿ ವಾಹನ ಬಳಕೆಯನ್ನು ಕಡಿಮೆ ಮಾಡಲು ಆಯಾ ಕಂಪನಿಗಳಿಗೆ ಹೆಚ್ಚಿನ ಎಸಿ ಬಸ್‌ಗಳನ್ನು ಒದಗಿಸುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ. ಇದೇ ವೇಳೆ ಸಾರಿಗೆ ನಿಗಮಗಳಲ್ಲಿನ ಆರ್ಥಿಕ ಸೋರಿಕೆ ತಡೆಗಟ್ಟಲು ಮತ್ತು ದುಂದುವೆಚ್ಚಕ್ಕೆ ಕಟ್ಟುನಿಟ್ಟಿನ ಕಡಿವಾಣ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಯೋಜನೆಗಳು ಜಾರಿಯಾದಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.