SK Home Ad
Home ನಮ್ಮ ಜಿಲ್ಲೆ ಯಾದಗಿರಿ ಪೊಲೀಸರಿಂದ ಹಲ್ಲೆ: ವೃದ್ಧ ಸಾವು – ಕುಟುಂಬಸ್ಥರ ಆಕ್ರೋಶ

ಪೊಲೀಸರಿಂದ ಹಲ್ಲೆ: ವೃದ್ಧ ಸಾವು – ಕುಟುಂಬಸ್ಥರ ಆಕ್ರೋಶ

0
72

ಪೊಲೀಸ್ ಠಾಣೆಯಲ್ಲೇ ವೃದ್ಧನ ಸಾವು: ಖಾಕಿ ವಿರುದ್ಧ ಹಲ್ಲೆ ಆರೋಪ

ಯಾದಗಿರಿ: ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆಸಿಕೊಂಡಿದ್ದ ವೃದ್ಧರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಪೊಲೀಸ್ ಹಲ್ಲೆಯಿಂದಲೇ ವೃದ್ಧ ಮೃತಪಟ್ಟಿದ್ದಾರೆ ಎಂದು ದೂರಿದ್ದಾರೆ.

ಮೃತರನ್ನು ಹುಣಸಗಿ ತಾಲೂಕಿನ ಕರಿಕಲ್ ಗ್ರಾಮದ ನಿವಾಸಿ ರಾಜೇಸಾಬ್ ವಾಲಿಕಾರ್ (70) ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ರಾಜೇಸಾಬ್ ಅವರನ್ನು ವಿಚಾರಣೆಗಾಗಿ ಠಾಣೆಗೆ ಕರೆಸಿಕೊಂಡಿದ್ದರು. ವಿಚಾರಣೆ ನಡೆಯುವ ಸಂದರ್ಭದಲ್ಲಿ ಠಾಣೆಯ ಎಎಸ್ಐ ಸಂಗಪ್ಪ ಅವರು ರಾಜೇಸಾಬ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: ಕನಕಪುರ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು ಲಿಂಗೈಕ್ಯ

ಕುಟುಂಬಸ್ಥರ ಆರೋಪದಂತೆ, ಹಲ್ಲೆಯಿಂದ ಅಸ್ವಸ್ಥಗೊಂಡ ರಾಜೇಸಾಬ್ ಠಾಣೆಯಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ಪೊಲೀಸರು ಅವರನ್ನು ತುರ್ತುವಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ರಾಜೇಸಾಬ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಹಾಗೂ ನಾರಾಯಣಪುರ ಪೊಲೀಸ್ ಠಾಣೆ ಎದುರು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜೇಸಾಬ್ ಅವರ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಘಟನೆಯ ಕುರಿತು ನ್ಯಾಯಾಂಗ ಅಥವಾ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: Football ಸಾಮ್ರಾಜ್ಯದ ಸುಲ್ತಾನ್: ಮೆಸ್ಸಿ ಈಗ ‘ಸರ್ವಶ್ರೇಷ್ಠ’ ದಾಖಲೆ ಸರದಾರ!

ಇದೇ ವೇಳೆ, ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ವೃದ್ಧನ ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸ್ಪಷ್ಟವಾಗುವ ಸಾಧ್ಯತೆ ಇದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಪೊಲೀಸ್ ಠಾಣೆಯಲ್ಲೇ ವಿಚಾರಣೆಗೆ ಕರೆಸಿಕೊಂಡ ವ್ಯಕ್ತಿಯ ಅನುಮಾನಾಸ್ಪದ ಸಾವು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಘಟನೆಯ ಸತ್ಯಾಸತ್ಯತೆ ಹೊರಬರಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ.