SK Home Ad
Home ಸಿನಿ ಮಿಲ್ಸ್ 22 ದಿನ ಮಾತೇ ಇಲ್ಲ… ವಿಷ್ಣುವರ್ಧನ್ ಜತೆಗಿನ ದಿನಗಳನ್ನು ನೆನೆದ ಎಸ್. ನಾರಾಯಣ್

22 ದಿನ ಮಾತೇ ಇಲ್ಲ… ವಿಷ್ಣುವರ್ಧನ್ ಜತೆಗಿನ ದಿನಗಳನ್ನು ನೆನೆದ ಎಸ್. ನಾರಾಯಣ್

0
71

ಬೆಂಗಳೂರು: ಕನ್ನಡ ಚಿತ್ರರಂಗದ ಸ್ಟಾರ್‌ ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ವೃತ್ತಿಪರತೆ ಹಾಗೂ ಸಹೋದ್ಯೋಗಿಗಳ ಮೇಲಿನ ಗೌರವಕ್ಕೆ ಸಾಕ್ಷಿಯಾಗುವ ಹಲವು ಘಟನೆಗಳಿವೆ. ಇದೀಗ ನಿರ್ದೇಶಕ ಎಸ್. ನಾರಾಯಣ್ ಅವರು ವಿಷ್ಣುವರ್ಧನ್ ಅವರೊಂದಿಗಿನ ತಮ್ಮ ಒಡನಾಟ ಹಾಗೂ ‘ವೀರಪ್ಪ ನಾಯಕ’ ಚಿತ್ರದ ಶೂಟಿಂಗ್ ದಿನಗಳ ವಿಶೇಷ ನೆನಪುಗಳನ್ನು ಹಂಚಿಕೊಂಡಿದ್ದಾರೆ.

1992ರಲ್ಲಿ ಎಸ್. ನಾರಾಯಣ್ ನಿರ್ದೇಶನದ ಮೊದಲ ಚಿತ್ರ ‘ಚೈತ್ರದ ಪ್ರೇಮಾಂಜಲಿ’ ಯಶಸ್ಸು ಕಂಡ ಬಳಿಕ, ವಿಷ್ಣುವರ್ಧನ್ ಅವರೇ ನಾರಾಯಣ್ ಅವರಿಗೆ ಕರೆ ಮಾಡಿ ತಮ್ಮೊಂದಿಗೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದರಂತೆ. ಈ ಕರೆ ಇಬ್ಬರ ನಡುವಿನ ಸಿನಿ ಪಯಣಕ್ಕೆ ಹೊಸ ನಾಂದಿ ಹಾಡಿತ್ತು.

22 ದಿನ ಇಬ್ಬರ ನಡುವೆ ಮಾತೇ ಇರಲಿಲ್ಲ!: ‘ವೀರಪ್ಪ ನಾಯಕ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಎಸ್. ನಾರಾಯಣ್ ಹಾಗೂ ವಿಷ್ಣುವರ್ಧನ್ ಅವರ ನಡುವೆ ಸಣ್ಣ ಮನಸ್ತಾಪ ಉಂಟಾಗಿತ್ತು. ಪರಿಣಾಮ ಇಬ್ಬರೂ ಸುಮಾರು 22 ದಿನಗಳ ಕಾಲ ಪರಸ್ಪರ ಮಾತನಾಡಿಕೊಂಡಿರಲಿಲ್ಲ.

ಆದರೆ ಇದರಿಂದ ಚಿತ್ರೀಕರಣಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಮಾತನಾಡದೇ ಇದ್ದರೂ ಇಬ್ಬರೂ ತಮ್ಮ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಮಾತಿನ ಬದಲು ನಟನೆಯ ಮೂಲಕವೇ ಪರಸ್ಪರ ಸಂವಹನ ನಡೆಸುತ್ತಿದ್ದರು. ಇದು ವಿಷ್ಣುವರ್ಧನ್ ಅವರ ವೃತ್ತಿಪರ ಬದ್ಧತೆ ಮತ್ತು ಇಬ್ಬರ ನಡುವಿನ ಗಾಢವಾದ ಗೌರವಕ್ಕೆ ಸಾಕ್ಷಿಯಾಗಿತ್ತು ಎಂದು ನಾರಾಯಣ್ ನೆನಪಿಸಿಕೊಂಡಿದ್ದಾರೆ.

‘ನಿರ್ದೇಶಕ ಸೋಲಬಾರದು’ ಎಂದಿದ್ದ ವಿಷ್ಣು: ಮನಸ್ತಾಪದ ದಿನಗಳು ಕಳೆದ ಬಳಿಕ ವಿಷ್ಣುವರ್ಧನ್ ಅವರೇ ಎಸ್. ನಾರಾಯಣ್ ಅವರಿಗೆ ಕರೆ ಮಾಡಿ ಮತ್ತೆ ಮಾತನಾಡಲು ಹಾಗೂ ಒಟ್ಟಿಗೆ ಕೆಲಸ ಮುಂದುವರಿಸಲು ಮುತುವರ್ಜಿ ವಹಿಸಿದ್ದರಂತೆ.

‘ನಿರ್ದೇಶಕರು ಸೋಲಬಾರದು. ನಿರ್ದೇಶಕರು ಗೆದ್ದರೆ ಮಾತ್ರ ಹೀರೋ ಗೆಲ್ಲುತ್ತಾನೆ’ ಎಂಬ ನಂಬಿಕೆ ವಿಷ್ಣುವರ್ಧನ್ ಅವರಿಗಿತ್ತು ಎಂದು ನಾರಾಯಣ್ ಹೇಳಿದ್ದಾರೆ. ನಿರ್ದೇಶಕರಿಗೆ ಅವರು ನೀಡುತ್ತಿದ್ದ ಗೌರವ ಮತ್ತು ಚಿತ್ರಕ್ಕಾಗಿ ತಂಡವಾಗಿ ಕೆಲಸ ಮಾಡುವ ಅವರ ಮನೋಭಾವವನ್ನು ಈ ಘಟನೆ ತೋರಿಸುತ್ತದೆ.

ಹೃದಯದ ಸೌಂದರ್ಯ ದೊಡ್ಡದು: ವಿಷ್ಣುವರ್ಧನ್ ಅವರು ನೋಡಲು ಅತ್ಯಂತ ಸುಂದರವಾಗಿದ್ದರು. ನೋಡಿದರೆ ಅವರ ಮುಖವನ್ನು ಒಂದು ಸಾರಿ ಮುಟ್ಟಬೇಕು ಎನಿಸುತ್ತಿತ್ತು. ಅಷ್ಟೇ ಅಲ್ಲ ಅವರ ಮುಖದ ಸೌಂದರ್ಯಕ್ಕಿಂತ ಹೃದಯದ ಸೌಂದರ್ಯ ಬಹಳ ದೊಡ್ಡದು ಎಂದರು.

ಕೊನೆಯ ಆಸೆ ಈಡೇರಿಸಲಾಗಲಿಲ್ಲ: ವಿಷ್ಣುವರ್ಧನ ಅವರ ಕೊನೆಯ ಆಸೆ ಈಡೇರಿಸಲು ಆಗಲಿಲ್ಲ ಎಂದು ಭಾವುಕರಾದ ನಾರಯಣ್.‌ ಸಾಯಿಬಾಬಾ ಕುರಿತ ಚಿತ್ರವನ್ನು ಮಾಡಬೇಕು ಎನ್ನುವ ಆಸೆ ಅವರಿಗಿತ್ತು. ಆದರೆ, ಅದು ನನ್ನ ಕೊನೆಯ ಸಿನಿಮಾ ಆಗುತ್ತದೆ ಎಂದಿದ್ದರು, ಹೀಗಾಗಿ ನಾನು ಅದು ಕೊನೆಯ ಚಿತ್ರ ಎನ್ನುವುದಾದರೆ ಅದನ್ನು ನಾನು ಮಾಡುವುದಿಲ್ಲ ಎಂದು ಹೇಳಿದ್ದೆ. ಆದರೆ, ಕೆಲದಿನಗಳಲ್ಲಿ ವಿಷ್ಣುವರ್ಧನ ನಮ್ಮನ್ನು ಬಿಟ್ಟು ಹೊರಟರು ಹೀಗಾಗಿ ಅವರ ಆಸೆ ಈಡೇರಿಸಲಾಗಲಿಲ್ಲ ಎಂದರು.