ಹುಬ್ಬಳ್ಳಿ: ಭಾರತ ದೇಶವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರವಾದ ಮೈಲಿಗಲ್ಲನ್ನು ದಾಖಲಿಸಿದ್ದು, ವೈದ್ಯಕೀಯ ಕ್ಷೇತ್ರದಲ್ಲೂ ಉನ್ನತ ಸಾಧನೆ ಮಾಡುವ ಮೂಲಕ ವಿಶ್ವವೇ ನೋಡುವಂತಾಗಿದೆ. ವಿಶ್ವವನ್ನೇ ಕಾಡಿದ ಮಹಾಮಾರಿಗೆ ಮದ್ದರೆದು ವಿದೇಶಗಳಿಗೆ ಹಂಚುವ ಮೂಲಕ ನಮ್ಮ ದೇಶ ಸದೃಢ ಹಾಗೂ ಸ್ವಾವಲಂಬಿ ಎಂಬುದನ್ನು ಸಾಬೀತುಪಡಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಗಬ್ಬೂರು ವೃತ್ತದ ಬಳಿ ನಿರ್ಮಿಸಲಾದ ಕೆಎಲ್ಇ ಸಂಸ್ಥೆಯ ಜಗದ್ಗುರು ಗಂಗಾಧರ ಮೂರುಸಾವಿರ ಮಠದ ವೈದ್ಯಕೀಯ ಮಹಾವಿದ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, `ಸರ್ವೇ ಜನಃ ಸುಖೀನೋ ಭವಂತು’ ಉಕ್ತಿಯಂತೆ ದೇಶದ ಜನ ಆರೋಗ್ಯವಾಗಿರಲಿ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹಲವು ಆರೋಗ್ಯ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯೊಂದರ ಅಡಿಯಲ್ಲೇ 44 ಕೋಟಿಗೂ ಹೆಚ್ಚು ಕುಟುಂಬಗಳು ವಿಮಾ ಸೌಲಭ್ಯ ಪಡೆದುಕೊಂಡಿದ್ದಾರೆ, 1.86 ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು.
ಮೋದಿ ಅವರ ವಿಕಸಿತ ಭಾರತ ಸಂಕಲ್ಪದಡಿ ದೇಶದಲ್ಲಿ ನೂತನವಾಗಿ 751 ಮೆಡಿಕಲ್ ಕಾಲೇಜು, 1.30 ಮೆಡಿಕಲ್ ಸೀಟುಗಳು ಜಾಸ್ತಿಯಾಗಿವೆ. ಅನೇಕ ಹಿಂದುಳಿದ ಜಿಲ್ಲೆ, ತಾಲೂಕುಗಳಲ್ಲಿ 22 ಏಮ್ಸ್ ಆಸ್ಪತ್ರೆಗಳ ನಿರ್ಮಾಣವಾಗಿದ್ದು, ರಾಜ್ಯದಲ್ಲಿ ಬೃಹತ್ ಇಂಡಸ್ಟಿçಯಲ್ ಕಾರಿಡಾರ್ ನಿರ್ಮಾಣ ಮಾಡುವ ಯೋಚನೆ ಇದ್ದು, ಅದಕ್ಕಾಗಿ 33 ಕೋಟಿ ರೂ. ಮೀಸಲಿಡಲಾಗಿದೆ. ಆದರೆ, ರಾಜ್ಯ ಸರ್ಕಾರ ಭೂಮಿ ಒದಗಿಸಿಕೊಡಬೇಕಿದೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ಕೆಎಲ್ಇ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಡಾ. ಪ್ರಭಾಕರ ಕೋರೆ ಅವರ ಪಾತ್ರ ಮಹತ್ವದ್ದಾಗಿದೆ. ಸಮಾಜ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಕೆಎಲ್ಇ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದರು.
ಕೆಎಲ್ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ(ಕಾಹೇರ) ಕುಲಾಧಿಪತಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ, ಬಡವರಿಗೂ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು ಎಂಬ ಕಾರಣಕ್ಕೆ ಮೂರುಸಾವಿರಮಠದ ಲಿಂ. ಜಗದ್ಗುರು ಗಂಗಾಧರ ರಾಜಯೋಗಿಂದ್ರ ಸ್ವಾಮೀಜಿಗಳು ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ನಿರ್ಮಾಣಮಾಡಲು ಗಬ್ಬೂರು ಬಳಿ 23 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ದಾನವಾಗಿ ಲಭಿಸಿದ ಭೂಮಿಯಲ್ಲೇ ಇಂದು ಬೃಹತ್ ಆಸ್ಪತ್ರೆ, ಕಾಲೇಜು ನಿರ್ಮಾಣವಾಗಿದ್ದು, ಆಸ್ಪತ್ರೆಗೆ ಮತ್ತು ಕಾಲೇಜಿಗೆ ಅವರ ಹೆಸರನ್ನೇ ಇಡಲಾಗಿದೆ. ಕೆಎಲ್ಇ ಮತ್ತು ಮೂರುಸಾವಿರಮಠ ಅನ್ಯೋನ್ಯವಾಗಿದ್ದು, ನಮ್ಮ ಅನೇಕ ಶಾಲಾ, ಕಾಲೇಜುಗಳಿಗೆ ಮಠ ಭೂದಾನ ಮಾಡಿದೆ ಎಂದು ಶ್ಲಾಘಿಸಿದರು.
ಡಾ. ಪ್ರಭಾಕರ ಕೋರೆ, ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಂಸದರಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ವಿ.ಪ.ಸದಸ್ಯ ಬಸವರಾಜ ಹೊರಟ್ಟಿ, ರಾಜ್ಯಸಭಾ ಸದಸ್ಯ ಎಂ. ನಾಗರಾಜ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ, ಕಾರ್ಯಾಧ್ಯಕ್ಷ ಅಮಿತ್ ಕೋರೆ, ಮಾಜಿ ಸಂಸದ ರಮೇಶ ಕತ್ತಿ, ಡಾ. ಸಂದೀಪ ಶ್ರೀವಾತ್ಸವ, ಡಾ. ಅಶೋಕ ಶೆಟ್ಟರ, ಶಂಕರಣ್ಣ ಮುನವಳ್ಳಿ, ಮಹಾಂತೇಶ ಕವಟಗಿಮಠ ಮುಂತಾದವರು ಇದ್ದರು. ಕೆಎಲ್ಇ ಸಂಗೀತ ಮಹಾವಿದ್ಯಾಲಯದ ತಂಡದವರು ವಂದೇ ಮಾತರಂ, ರಾಷ್ಟ್ರಗೀತೆ ಹಾಗೂ ಪ್ರಾರ್ಥನಾಗೀತೆ ಹಾಡಿದರು.




















