ಯಾದಗಿರಿ (ವಡಗೇರಾ): ಪಟ್ಟಣದ ಬಸವನಗರದಲ್ಲಿರುವ ಆಳವಾದ ಮುರಮ್‌ಕ್ವಾರಿಯ ತೆಗ್ಗಿನಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮತ್ತು ಓರ್ವ ಮಹಿಳೆ ಸೇರಿ 3 ಜನರು ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ಜರುಗಿದೆ.
ಮೃತರು ಗುಂಡಮ್ಮ (35), ಸುಜಾತ (9), ಶಿವಲೀಲಾ (10) ಮೃತಪಟ್ಟವರೆಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಸಮರ್ಪಕವಾಗಿ ನಳದ ನೀರು ಬರದ ಕಾರಣ ಬಟ್ಟೆ ತೊಳೆಯಲೆಂದು ಮುರಮ್‌ಕ್ವಾರಿಗೆ ಹೋಗಿದ್ದಾರೆ. ಈ ವೇಳೆ ಸುಜಾತ ಮತ್ತು ಶಿವಲೀಲಾ ಕಾಲು ಜಾರಿ ತಗ್ಗಿನಲ್ಲಿ ಬಿದ್ದಿದ್ದಾರೆ.
ಆ ಇಬ್ಬರು ಬಾಲಕಿಯರನ್ನು ರಕ್ಷಿಸಲು ಗುಂಡಮ್ಮ ಎಂಬ ಓರ್ವ ಮಹಿಳೆ ನೀರಿಗೆ ಹಾರಿ ಬಾಲಕಿಯರ ಪ್ರಾಣ ರಕ್ಷಿಸಲು, ಜೀವ ಉಳಿಸಲು ಬಹಳ ಪ್ರಯತ್ನ ಪಟ್ಟಿದ್ದಾಳೆ. ಕೊನೆಗೆ ಮೂರು ಜನ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಶಾಲೆ ಕಲಿಯುವ ಈ ಬಾಲಕಿಯರು ಸೇರಿ ಮೂವರು ಮೃತಪಟ್ಟಿದ್ದು, ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳಗಿದೆ. ಇನ್ನು ಈ ಕುರಿತಂತೆ ಪ್ರಕರಣ ದಾಖಲಾಗಿದೆ.






















