SK Home Ad
Home ನಮ್ಮ ಜಿಲ್ಲೆ ಯಾದಗಿರಿ ಸಿಎಂ ರಾಜೀನಾಮೆ ಪಡೆಯದಂತೆ ಒತ್ತಾಯ: ‘ನಮ್ಮ ನಾಯಕನಿಗಾಗಿ ಪ್ರಾಣ ಬಿಡಲೂ ಸಿದ್ಧ’; ಆತ್ಮಹತ್ಯೆಗೆ ಯತ್ನಿಸಿದ ಫ್ಯಾನ್

ಸಿಎಂ ರಾಜೀನಾಮೆ ಪಡೆಯದಂತೆ ಒತ್ತಾಯ: ‘ನಮ್ಮ ನಾಯಕನಿಗಾಗಿ ಪ್ರಾಣ ಬಿಡಲೂ ಸಿದ್ಧ’; ಆತ್ಮಹತ್ಯೆಗೆ ಯತ್ನಿಸಿದ ಫ್ಯಾನ್

0
34

ಯಾದಗಿರಿ: ಕಾಂಗ್ರೆಸ್‌ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ಪಡೆಯಬಾರದು ಎಂದು ಒತ್ತಾಯಿಸಿ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಪ್ರದೇಶ ಕುರುಬ ಸಂಘದ ಜಿಲ್ಲಾ ಘಟಕ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ಕಾರ್ಯಕರ್ತರೊಬ್ಬರು ಸಾರ್ವಜನಿಕರ ಎದುರೇ ವಿಷ ಕುಡಿಯಲು ಯತ್ನಿಸಿದ ಆತಂಕಕಾರಿ ಘಟನೆ ಇಂದು ನಡೆದಿದೆ.

ನಗರದ ಪ್ರಮುಖ ಕೇಂದ್ರವಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಘೋಷಣೆಗಳನ್ನು ಕೂಗಿದರು. ಬಳಿಕ ರಸ್ತೆಯಲ್ಲೇ ಮಾನವ ಸರಪಳಿ ರಚಿಸಿ ಕುಳಿತುಕೊಂಡಿದ್ದರಿಂದ ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು ಸಾರ್ವಜನಿಕರು ಪರದಾಡುವಂತಾಯಿತು.

ನಂತರ ಪ್ರತಿಭಟನೆಯ ಆರಂಭದಲ್ಲಿ ಕಾರ್ಯಕರ್ತರು ರಸ್ತೆಯ ಮಧ್ಯದಲ್ಲಿ ಟೈರ್‌ಗೆ ಬೆಂಕಿ ಹಚ್ಚಲು ಮುಂದಾಗಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅವರನ್ನು ತಡೆದು ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದ್ದಾರೆ. ಆದ್ರೆ ಈ ನಡುವೆ ವ್ಯಕ್ತಿಯೊಬ್ಬರು ದಿಢೀರನೆ ಟೈರ್‌ಗೆ ಪೆಟ್ರೋಲ್‌ ಹಾಕಿ ಬೆಂಕಿ ಹಚ್ಚಿಯೇ ಬಿಟ್ಟರು. ಪೊಲೀಸರು ತಕ್ಷಣವೇ ನೀರು ಹಾಕಿ ಬೆಂಕಿ ನಂದಿಸಲು ಮುಂದಾದಾಗ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಈ ಎಲ್ಲ ಗದ್ದಲದ ನಡುವೆಯೇ ಸಿದ್ದರಾಮಯ್ಯ ಪರಮಾಪ್ತ ಅಭಿಮಾನಿಯಾದ ಭೀಮು ಪೂಜಾರಿ ಎಂಬುವವರು ತೀವ್ರ ಭಾವುಕರಾದರು. “ಬೆಂಕಿ ಹಚ್ಚಿದ್ದಕ್ಕೇ ಇಷ್ಟೊಂದು ಸಂಕಷ್ಟ ತಂದೊಡ್ಡಲಾಗುತ್ತಿದೆ. ನಮ್ಮ ನಾಯಕ ಸಿದ್ದರಾಮಯ್ಯ ಅವರಿಗಾಗಿ ನಾನು ವಿಷ ಕುಡಿಯಲು ಸಿದ್ಧ” ಎಂದು ಜೋರಾಗಿ ಕೂಗಿದರು. ನೋಡನೋಡುತ್ತಿದ್ದಂತೆ ತಮ್ಮ ಜೇಬಿನಿಂದ ವಿಷದ ಬಾಟಲಿಯನ್ನು ತೆಗೆದು ನೇರವಾಗಿ ಕುಡಿಯಲು ಮುಂದಾದರು.

ಭೀಮು ಪೂಜಾರಿ ಈ ದಿಢೀರ್ ನಿರ್ಧಾರದಿಂದ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಪೊಲೀಸರು ಒಂದು ಕ್ಷಣ ಬೆಚ್ಚಿಬಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಹತ್ತಿರದಲ್ಲಿದ್ದ ಸಹ-ಪ್ರತಿಭಟನಾಕಾರರು ಮತ್ತು ಪೊಲೀಸ್ ಸಿಬ್ಬಂದಿ ಭೀಮು ಕೈಯನ್ನು ಗಟ್ಟಿಯಾಗಿ ಹಿಡಿದು, ವಿಷದ ಬಾಟಲಿಯನ್ನು ಬಲವಂತವಾಗಿ ಕಸಿದುಕೊಂಡರು. ಇದರಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.

ಒಟ್ಟಾರೆ.. ಈ ರಾಜ್ಯ ರಾಜಕೀಯ ಗೊಂದಲ ಇನ್ನೂ ತಿಳಿಯಾಗಿಲ್ಲ. ಹಾಗೇ ಇಂದು ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಲಿದ್ದಾರೆ