ಹುಬ್ಬಳ್ಳಿ: ತಂದೆ ಸಿದ್ದರಾಮಯ್ಯ ಅವರು ಜನಪರ, ಅಭಿವೃದ್ಧಿಪರ ಆಡಳಿತ ನೀಡುವ ಮೂಲಕ ಜನಮನ್ನಣೆ ಗಳಿಸಿದ ನಾಯಕರಾಗಿದ್ದಾರೆ. ಹೀಗಿದ್ದಾಗ ಜನಾಕ್ರೋಶ ಎಂಬುದು ಎಲ್ಲಿದೆ? ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆ ಸರಿಯಲ್ಲ. ಪದೇ ಪದೆ ಎಲ್‌ಪಿಜಿ, ತೈಲ ಬೆಲೆ ಹೆಚ್ಚಳ ಮಾಡಿ ಅವರೇ ದೇಶದ ಜನಾಕ್ರೋಶಕ್ಕೆ ಗುರಿಯಾಗಿದ್ದಾರೆ ಎಂದು ನಗರಾಭಿವೃದ್ಧಿ ಖಾತೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ವಿಜಯಪುರಕ್ಕೆ ತೆರಳುವ ಮುನ್ನ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರದ ವಿರುದ್ಧ ಕಿಡಿಕಾರಿದರು. ಕೇಂದ್ರ ಸರಕಾರ ಮೇಲಿಂದ ಮೇಲೆ ಎಲ್‌ಪಿಜಿ ದರ ಏರಿಕೆ ಮಾಡಿ ಜನರ ಮೇಲೆ ಬರೆ ಎಳೆಯುತ್ತಿದೆ. ದರ ಹೆಚ್ಚಳಕ್ಕೆ ಮೀತಿಯೇ ಇಲ್ಲದಂತಾಗಿದೆ. ಮನಸೋ ಇಚ್ಛೆ ಬೆಲೆ ಹೆಚ್ಚಳ ಮಾಡಿದರೆ ಜನಸಾಮಾನ್ಯರು ಜೀವನ ನಡೆಸುವುದು ಹೇಗೆ, ಇದೊಂದು ಜನವಿರೋಧಿ ಕೇಂದ್ರ ಸರ್ಕಾರ ಎಂದು ಹೇಳಿದರು.
ನಗರಾಭಿವೃದ್ಧಿ ಇಲಾಖೆಯಲ್ಲಿ ಏನೆಲ್ಲಾ ಅಭಿವೃದ್ಧಿ ವಿಷಯ, ಯೋಜನೆ ಇವೆ ಎಂಬುದನ್ನು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಈಗಷ್ಟೇ ಅಧಿಕಾರ ಸ್ವೀಕಾರ ಮಾಡಿದ್ದು ಸಮಗ್ರ ಮಾಹಿತಿ ಪಡೆಯುತ್ತೇನೆ. ಟೌನ್ ಪ್ಲ್ಯಾನಿಂಗ್, ಮಾಸ್ಟರ್ ಪ್ಲ್ಯಾನಿಂಗ್, ಮೂಲಸೌಕರ್ಯಕ್ಕೆ ಒತ್ತು ಕೊಡುವ ಜೊತೆಗೆ ಸಾಕಷ್ಟು ಯೋಜನೆ ಮಾಡಬೇಕು ಎಂಬ ಉದ್ದೇಶ ಹೊಂದಲಾಗಿದೆ ಎಂದರು.
ಇನ್ನೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು, ನಾನು ಹಿಂದು ಎಂಬ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿ ಇದರಲ್ಲಿ ಏನು ತಪ್ಪು ಇಲ್ಲ. ಪ್ರತಿಯೊಬ್ಬ ಹಿಂದು ಹೇಳುವ ಮಾತನ್ನು ಸಿಎಂ ಹೇಳಿದ್ದಾರೆ. ತನ್ನ ಧರ್ಮದ ಬಗ್ಗೆ ಹೇಳಿಕೊಳ್ಳುವ ವಿಚಾರವಾಗಿದೆ ಎಂದರು.
ಮೊಟ್ಟ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಸಚಿವ ಡಾ. ಯತೀಂದ್ರ ಅವರನ್ನು ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ಬಸವರಾಜ ಶಿವಣ್ಣವರ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.





















