ಕನ್ನಡಿಗರಿಗೆ ಏಕೋ ಏನೋ ಇಂದಿನ ಶುಕ್ರವಾರ ಶುಭ ಆಗಲಿಲ್ಲ… ಬೆಳ್ಳಂಬೆಳಗ್ಗೆಯೇ ಸಾವಿನ ಸುದ್ದಿಯಿಂದ ಆರಂಭವಾದ ಶುಕ್ರವಾರ, ಸಂಜೆಯ ಹೊತ್ತಿಗೆ ಮತ್ತೊಂದು ದೊಡ್ಡ ದುರಂತದ ಸುದ್ದಿ ಬಂದಿದೆ. ಅಪಘಾತದಲ್ಲಿ 6 ಜನ ಮೃತಪಟ್ಟ ಘಟನೆ ನಡೆದಿದೆ. ಈ ಮೂಲಕ ಅಕ್ಷರಶಃ ಶುಕ್ರವಾರ ಎನ್ನುವುದು ಕರಾಳ ಶುಕ್ರವಾರ ಎನ್ನುವಂತಾಗಿದೆ.
ರಾಜ್ಯದಲ್ಲಿ ಸುರಿಯುತ್ತಿರುವ ಅಕಾಲಿಕ ಭಾರಿ ಮಳೆ ಹಾಗೂ ನಿರ್ಲಕ್ಷ್ಯದ ನಡುವೆ ಎರಡು ಭೀಕರ ದುರಂತಗಳು ನಡೆದಿದ್ದು, ಒಟ್ಟು ಹತ್ತು ಮಂದಿ ದುರ್ಮರಣಕ್ಕೀಡಾಗಿರುವ ಮನಕಲಕುವ ಘಟನೆಗಳು ಉತ್ತರ ಕರ್ನಾಟಕ ಭಾಗವನ್ನು ಬೆಚ್ಚಿಬೀಳಿಸಿವೆ.
ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮೋರಟಗಿ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದ ದಾರುಣ ಘಟನೆಯಲ್ಲಿ, ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿಯಾಗಿದ್ದಾರೆ. ಮೃತರನ್ನು ಗುರುನಾಥ ಬಡಿಗೇರ, ಪತ್ನಿ ಜ್ಯೋತಿ ಬಡಿಗೇರ ಹಾಗೂ ಮಕ್ಕಳಾದ ಕಾಳಮ್ಮ ಮತ್ತು ಕೀರ್ತಿ ಎಂದು ಗುರುತಿಸಲಾಗಿದೆ.
ಸ್ವಂತ ಮನೆಯ ದುರಸ್ತಿ ಕಾರ್ಯ ನಡೆಯುತ್ತಿದ್ದ ಹಿನ್ನೆಲೆ, ಕುಟುಂಬ ಕಳೆದ ಕೆಲವು ದಿನಗಳಿಂದ ಹಳೆಯ ಬಾಡಿಗೆ ಮನೆಯಲ್ಲಿ ವಾಸವಿತ್ತು. ಆದರೆ ಗುರುವಾರ ರಾತ್ರಿ ಸುರಿದ ಭಾರಿ ಗಾಳಿ-ಮಳೆಗೆ ಮನೆಯ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದಿದೆ. ಗಾಢ ನಿದ್ರೆಯಲ್ಲಿದ್ದ ಕುಟುಂಬದವರು ಅವಶೇಷಗಳಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನೊಂದೆಡೆ ವಿಜಯನಗರ ಜಿಲ್ಲೆಯ ಟಿಬಿ ಡ್ಯಾಂ ಸಮೀಪ ಸಂಭವಿಸಿದ ಭೀಕರ ಟ್ರ್ಯಾಕ್ಟರ್ ಪಲ್ಟಿ ದುರಂತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸಂಡೂರು ತಾಲೂಕಿನ ಯಶವಂತನಗರ ಹಾಗೂ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಗ್ರಾಮದ ನಿವಾಸಿಗಳಾದ ಕೆಂಚಪ್ಪ, ಮಹಾಂತೇಶ್, ಭರತ್, ಸವಿತಾ, ಮಾರೇಶ್ ಹಾಗೂ ಗೌರಮ್ಮ ಮೃತರು ಎಂದು ಗುರುತಿಸಲಾಗಿದೆ.
ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಪ್ರಯಾಣಿಕರು ರಸ್ತೆ ಬದಿಗೆ ಎಸೆಯಲ್ಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೊಸಪೇಟೆ ಹಾಗೂ ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಒಂದೆಡೆ ಮಳೆಯ ಆರ್ಭಟಕ್ಕೆ ಕುಟುಂಬವೊಂದು ಬಲಿಯಾಗಿದ್ದರೆ, ಮತ್ತೊಂದೆಡೆ ಟ್ರ್ಯಾಕ್ಟರ್ ದುರಂತ ಆರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಒಟ್ಟಾರೆ ಎರಡು ಪ್ರತ್ಯೇಕ ಘಟನೆಗಳಲ್ಲಿ 10 ಜನ ಮೃತಪಟ್ಟಿದ್ದು, ಶುಭ ಶುಕ್ರವಾರ Black Friday ಆಗಿ ಮಾರ್ಪಟ್ಟಿದೆ.





















