ಹೊಸಪೇಟೆ: ವಿಜಯನಗರ, ಬಳ್ಳಾರಿ ಜಿಲ್ಲೆಗಳು ತೀವ್ರವಾಗಿ ಬರಗಾಲದಿಂದ ತತ್ತರಿಸಿವೆ. ಸರ್ಕಾರ ಸಂಪುಟ ವಿಸ್ತರಣೆಯಲ್ಲೇ ಮುಳುಗಿಹೋಗಿದ್ದು, ರೈತರನ್ನು ಸಂಪೂರ್ಣ ಮರೆತುಬಿಟ್ಟಿದೆ. ಬರ ನಿರ್ವಹಣೆಯಲ್ಲಿ ಅದು ಸಂಪೂರ್ಣ ವಿಫಲವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಗುರುವಾರ ತಾಲೂಕಿನ ಭುವನಹಳ್ಳಿಯಲ್ಲಿ ಬರ ಅಧ್ಯಯನ ನಡೆಸಿದ ಬಳಿಕ ಮಾತನಾಡಿದ ಅವರು, ತಕ್ಷಣ ಬರಪೀಡಿತ ಜಿಲ್ಲೆಗಳನ್ನು ಘೋಷಿಸದಿದ್ದರೆ ಆ. 13ರಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ರೈತರು ಬಿತ್ತನೆ ಬೀಜವನ್ನು ವಾಪಸ್ ಮಾಡುತ್ತಿದ್ದಾರೆ. ಕನಿಷ್ಠ ಪಕ್ಷ ಬೀಜ ನಿಮ್ಮಲ್ಲೇ ಇಟ್ಟುಕೊಳ್ಳಿ, ಪರಿಹಾರ ನೀಡಲಾಗುವುದು ಎಂಬ ಭರವಸೆಯನ್ನೂ ಸರ್ಕಾರ ನೀಡಿಲ್ಲ. ಗುಳೆ ಹೋಗುವುದನ್ನು ತಡೆಯಲು ಸಹ ಕ್ರಮ ಕೈಗೊಂಡಿಲ್ಲ. ಬರಗಾಲದಿಂದ ಜಲಾಶಯಗಳು ಖಾಲಿಯಾಗಿದ್ದರೆ, ಸರ್ಕಾರದ ದುರಾಡಳಿತದಿಂದ ಬೊಕ್ಕಸವೂ ಖಾಲಿಯಾಗಿದೆ. ಕಮಿಷನ್ ಹೊಡೆಯುವುದರಲ್ಲಿ ಮಾತ್ರ ನಿರತವಾಗಿರುವ ಸರ್ಕಾರದ ಬಗ್ಗೆ ಜನ ವಿಶ್ವಾಸವನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ ಎಂದರು.
ರಾಜ್ಯದಲ್ಲಿ 150ಕ್ಕೂ ಅಧಿಕ ತಾಲೂಕುಗಳಲ್ಲಿ ತೀವ್ರ ಬರಗಾಲ ಸ್ಥಿತಿ ಇದೆ. ಈಗಾಗಲೇ ಸರ್ಕಾರ ಬರಪೀಡಿತ ಪ್ರದೇಶಗಳನ್ನು ಘೋಷಿಸಬೇಕಿತ್ತು. ಹಾಗಿದ್ದರೆ ವಿಮಾ ಹಣ ರೈತರಿಗೆ ಶೀಘ್ರ ದೊರಕುತ್ತಿತ್ತು ಹಾಗೂ ಕೇಂದ್ರ ತಂಡವೂ ಭೇಟಿ ಕೊಟ್ಟು, ಎನ್‌ಡಿಆರ್‌ಎಫ್‌ನಿಂದ ಪರಿಹಾರ ಶೀಘ್ರ ದೊರಕುವಂತಾಗುತ್ತಿತ್ತು. ಆದರೆ ಸರ್ಕಾರ ಇನ್ನೂ ಬರಪೀಡಿತ ಪ್ರದೇಶ ಘೋಷಿಸಿಲ್ಲ ಎಂದು ಅಶೋಕ ಆರೋಪಿಸಿದರು.
ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದಾಗ ರೈತರು ಹಲವಾರು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸರಿಯಾಗಿ ರೈತರ ಕಷ್ಟಗಳಿಗೆ ಸ್ಪಂದಿಸಿದ್ದರೆ ಇಷ್ಟೆಲ್ಲ ದೂರುಗಳು ಕೇಳಿಬರುತ್ತಿರಲಿಲ್ಲ. ತಹಶೀಲ್ದಾರ್‌ಗಳನ್ನು ಕೇಳಿದರೆ ಬರಪೀಡಿತ ಪ್ರದೇಶ ಘೋಷಣೆಯಾಗದ ಕಾರಣ ಪರಿಹಾರವನ್ನು ತಕ್ಷಣ ಕೊಡಲು ಸಾಧ್ಯವಾಗುತ್ತಿಲ್ಲ, ಇದೀಗ ಟ್ರೈನಿಂಗ್ ನೀಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇಡೀ ರಾಜ್ಯ ತೀವ್ರ ಬರಗಾಲದಿಂದ ತತ್ತರಿಸಿರುವಾಗ ಇನ್ನೂ ಟ್ರೈನಿಂಗ್ ನೀಡುತ್ತ ಇದ್ದರೆ ಪರಿಹಾರ ನೀಡುವುದು ಯಾವಾಗ ಎಂದು ಅವರು ಪ್ರಶ್ನಿಸಿದರು.






















