ದಾಂಡೇಲಿ (ಉತ್ತರ ಕನ್ನಡ) ಸಂ.ಕ. ಸಮಾಚಾರ : ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಗುರುತಿಸುವ ಕಸ್ತೂರಿರಂಗನ್ ಶಿಫಾರಸಿನ ಸುತ್ತ ಮತ್ತೆ ಚರ್ಚೆ, ಆತಂಕ ಮತ್ತು ಆಕ್ಷೇಪಣೆಗಳು ಮುನ್ನೆಲೆಗೆ ಬಂದಿವೆ. ಮೂಲ ಪಶ್ಚಿಮ ಘಟ್ಟಗಳ ಕುರಿತ ಉನ್ನತ ಮಟ್ಟದ ಕಾರ್ಯಕಾರಿ ಸಮಿತಿ (High Level Working Group–HLWG) ವರದಿಯ ಪ್ರಕಾರ ಉತ್ತರ ಕನ್ನಡದ ಹಳೆಯ ತಾಲೂಕು ವ್ಯವಸ್ಥೆಯಲ್ಲಿ ಜೋಯಿಡಾದ 110, ಶಿರಸಿಯ 125, ಸಿದ್ದಾಪುರದ 107 ಹಾಗೂ ಯಲ್ಲಾಪುರದ 87, ಕಾರವಾರದ 39, ಅಂಕೋಲಾದ 43, ಕುಮಟಾದ 43, ಹೊನ್ನಾವರದ 44 ಹಾಗೂ ಭಟ್ಕಳ ದ 28 ಗ್ರಾಮಗಳು ಸೇರಿ 9 ತಾಲೂಕಿನ 626 ಗ್ರಾಮಗಳು ( ESA) ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಗುರುತಿಸಲ್ಪಟ್ಟಿವೆ.
ಈ ಪಟ್ಟಿಯಲ್ಲಿರುವ ಗ್ರಾಮಸ್ಥರಿಗೆ ಆತಂಕ ಹೊಸದಲ್ಲ. ಹಿಂದಿನ ಕರಡುಗಳ ಸಂದರ್ಭದಲ್ಲೂ ಆಕ್ಷೇಪಣೆ, ಮನವಿ, ದಾಖಲೆ ಸಲ್ಲಿಕೆ ನಡೆದಿದ್ದರೂ, ಮತ್ತೆ ಮತ್ತೆ ಕರಡುಗಳು ಹೊರಬರುತ್ತಿರುವುದು “ಒಮ್ಮೆ ಸಲ್ಲಿಸಿದ ಆಕ್ಷೇಪಣೆಗೆ ಅಂತಿಮ ಉತ್ತರ ಯಾವಾಗ?” ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಪರಿಸರ ಸಂರಕ್ಷಣೆ ಅಗತ್ಯವೇ ಸರಿ. ಆದರೆ ಅರಣ್ಯ, ಜಲಮೂಲ ಮತ್ತು ಜೀವವೈವಿಧ್ಯ ರಕ್ಷಣೆಯ ಹೆಸರಿನಲ್ಲಿ ತಲೆತಲಾಂತರಗಳಿಂದ ಕೃಷಿ–ತೋಟಗಾರಿಕೆಯನ್ನು ಅವಲಂಬಿಸಿರುವ ಜನರ ಬದುಕು ಅನಿಶ್ಚಿತವಾಗಬಾರದು. ದೊಡ್ಡ ಪ್ರಮಾಣದ ಪರಿಸರ ಹಾನಿಕಾರಕ ಚಟುವಟಿಕೆಗಳ ನಿಯಂತ್ರಣದ ಜೊತೆಗೆ ಸಣ್ಣ ರೈತರು, ಮನೆಗಳು ಮತ್ತು ಮೂಲಸೌಕರ್ಯಗಳ ಕುರಿತು ಸ್ಪಷ್ಟ ನಿಯಮಗಳು ಅಗತ್ಯ.
ಮತ್ತೆ ಕರಡು ಬೇಡ—ಗ್ರಾಮವಾರು ಸ್ಪಷ್ಟ ನಿರ್ಧಾರ ಬೇಕು! : ಹೊಸ ಕರಡು ಬಂದಾಗಲೆಲ್ಲ ಗ್ರಾಮಸ್ಥರು ಅದೇ ದಾಖಲೆಗಳನ್ನು ಹುಡುಕಿ ಮತ್ತೆ ಆಕ್ಷೇಪಣೆ ಸಲ್ಲಿಸುವ ಪರಿಸ್ಥಿತಿಗೆ ಅಂತ್ಯವಾಗಬೇಕು. ಹಿಂದಿನ ಆಕ್ಷೇಪಣೆಗಳನ್ನು ಗ್ರಾಮವಾರು ದಾಖಲಿಸಿ, ಯಾವುದು ಅಂಗೀಕರಿಸಲಾಗಿದೆ, ಯಾವುದು ತಿರಸ್ಕರಿಸಲಾಗಿದೆ ಮತ್ತು ಏಕೆ ಎಂಬುದನ್ನು ಸರ್ಕಾರ ಸಾರ್ವಜನಿಕಗೊಳಿಸಬೇಕು.
ಪಶ್ಚಿಮ ಘಟ್ಟ ಉಳಿಯಬೇಕು: ಅದರೊಂದಿಗೆ ಪಶ್ಚಿಮ ಘಟ್ಟದ ಜನರ ಬದುಕಿನ ಹಕ್ಕುಗಳೂ ಉಳಿಯಬೇಕು. ಕಸ್ತೂರಿರಂಗನ್ ಕರಡು ಮತ್ತೊಂದು ಆಕ್ಷೇಪಣೆಯ ಚಕ್ರವಾಗದೆ, ವೈಜ್ಞಾನಿಕತೆ–ಪಾರದರ್ಶಕತೆ–ಜನಪಾಲ್ಗೊಳ್ಳುವಿಕೆಯ ಅಂತಿಮ ನಿರ್ಧಾರಕ್ಕೆ ದಾರಿ ಮಾಡಿಕೊಡಬೇಕು.
ಪ್ರಸ್ತುತವೂ ಮಲೆನಾಡು ಪ್ರದೇಶದಲ್ಲಿ ಹೊಸ ESA ಕರಡು ಅಧಿಸೂಚನೆಯ ಕುರಿತಂತೆ ಪ್ರತಿಭಟನೆಗಳು ವ್ಯಕ್ತವಾಗುತ್ತಿದೆ.
- ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿಗಳ ಮನೆಯನ್ನೂ ಜಾಲಾಡಿದ ಇ.ಡಿ.
- ಪಿಬಿಜಿ ಅಲಾಸ್ಕನ್ ನೈಟ್ಸ್ ವಿರುದ್ಧವೂ ಸೋತ ಚೆಕ್ ಮುಂಬಾ ಮಾಸ್ಟರ್ಸ್
- 9 ದಿನ, 180 ಕಿ.ಮೀ. ನಡಿಗೆ: ಬಳ್ಳಾರಿಗೆ ಭರ್ಜರಿ ಎಂಟ್ರಿ ಕೊಟ್ಟ ‘ಬಳ್ಳಾರಿ ಚಲೋ’
- ಕರ್ನಾಟಕ ಸೇರಿ 4 ರಾಜ್ಯಗಳಿಗೆ ರೈಲ್ವೆ ಬಿಗ್ ಗಿಫ್ಟ್: ₹10,021 ಕೋಟಿ ವೆಚ್ಚದ 5 ಮಲ್ಟಿಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರ ಅಸ್ತು
- ರೈಲು ಕಾರ್ಯಾಚರಣೆ, ಸುರಕ್ಷತೆ ಪರಿಶೀಲಿಸಿದ ಸಚಿವ ಸೋಮಣ್ಣ: ಸಿಬ್ಬಂದಿಯ ಶಿಸ್ತಿಗೆ ಶ್ಲಾಘನೆ





















