ಕಾರವಾರ: ಮೀನುಗಾರಿಕಾ ಬೋಟ್ನಲ್ಲಿ ಹಿಡಿದ ಮೀನಿನಿಂದ ಹೊರಸೂಸಿದ ವಿಷಾನಿಲ ಸೇವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಐವರು ಅಸ್ವಸ್ಥಗೊಂಡ ಘಟನೆ ಕಾರವಾರದ ಮುದಗಾ ಬಂದರಿನಲ್ಲಿ ಸಂಭವಿಸಿದೆ.
ಮೃತರನ್ನು ಒಡಿಶಾ ಮೂಲದ ಪುರಂದರ ಬಿಸರಾ (21) ಹಾಗೂ ಆಕಾಶ (24) ಎಂದು ಗುರುತಿಸಲಾಗಿದೆ. ಅಂಕೋಲಾದ ಬೇಲೆಕೇರಿ ಮೂಲದ ಮೂಕಾಂಬಿಕಾ ಮೀನುಗಾರಿಕಾ ಬೋಟ್ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೋಟ್ನಲ್ಲಿದ್ದ ಇತರ ಐವರು ಕಾರ್ಮಿಕರು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಬೋಟ್ನಲ್ಲಿ ಮೀನುಗಾರಿಕೆ ನಡೆಸಿ ‘ಚಮನ್’ ಮೀನು ಹಿಡಿದು ತರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮೀನಿನಿಂದ ಹೊರಸೂಸಿದ ವಿಷಾನಿಲವನ್ನು ಸೇವಿಸಿದ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಈ ಪೈಕಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನಾಲ್ಕು ದಿನಗಳ ಹಿಂದಷ್ಟೇ ಉತ್ತರ ಕನ್ನಡ ಜಿಲ್ಲೆಯ ತದಡಿ ಬಂದರಿನಲ್ಲಿ ಇದೇ ರೀತಿಯ ವಿಷಾನಿಲ ದುರಂತ ಸಂಭವಿಸಿತ್ತು. ಮೀನುಗಾರಿಕಾ ಬೋಟ್ನಲ್ಲಿ ಮೀನಿನಿಂದ ಹೊರಸೂಸಿದ ವಿಷಾನಿಲ ಸೇವಿಸಿ ಮೂವರು ಮೀನುಗಾರರು ಮೃತಪಟ್ಟಿದ್ದರು. ಇದೀಗ ಅಲ್ಪಾವಧಿಯಲ್ಲೇ ಮತ್ತೊಂದು ದುರಂತ ಸಂಭವಿಸಿರುವುದು ಮೀನುಗಾರಿಕಾ ವಲಯದಲ್ಲಿ ಆತಂಕ ಮೂಡಿಸಿದೆ.






















