Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಖ್ಯಾತ ಯಕ್ಷಗಾನ ಭಾಗವತ ಸುಬ್ರಾಯ ಹೆಗಡೆ ಕಪ್ಪೆಕೆರೆ ನಿಧನ

ಖ್ಯಾತ ಯಕ್ಷಗಾನ ಭಾಗವತ ಸುಬ್ರಾಯ ಹೆಗಡೆ ಕಪ್ಪೆಕೆರೆ ನಿಧನ

0
67

ಹೊನ್ನಾವರ: ಯಕ್ಷಗಾನದ ಖ್ಯಾತ ಭಾಗವತ ಕಪ್ಪೆಕೆರೆ ಸುಬ್ರಾಯ ಹೆಗಡೆ (79) ಬುಧವಾರ ನಿಧನರಾದರು. ಅವರು ಪತ್ನಿ, ಇಬ್ಬರು ಪುತ್ರರು, ಅಪಾರ ಅಭಿಮಾನಿಗಳನ್ನು, ಬಂಧು ಬಳಗವನ್ನು ಅಗಲಿದ್ದಾರೆ.

ಸಾಂಪ್ರದಾಯಿಕ ಹಾಡುಗಾರಿಕೆಯನ್ನು ಕಾಪಾಡಿಕೊಂಡು ಬಂದಿದ್ದ ಕಪ್ಪೆಕೆರೆ ಸುಬ್ರಾಯ ಹೆಗಡೆ ಭಾಗವತರು, ಬಡಗುತಿಟ್ಟಿನ ಅಗ್ರಮಾನ್ಯ ಭಾಗವತರು. ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ, ನೆಬ್ಬೂರು ನಾರಾಯಣ ಹೆಗಡೆ, ಕರ್ಕಿ ಸತ್ಯನಾರಾಯಣ ಹಾಸ್ಯಗಾರ, ಪ್ರಭಾಕರ ಭಂಡಾರಿಯವರಂತಹ ಶ್ರೇಷ್ಠ ಕಲಾವಿದರ ರಂಗದ ಒಡನಾಡಿಯಾಗಿದ್ದರು. ಮರವಂತೆ ನರಸಿಂಹ ದಾಸ, ಎಂ. ನಾರ್ಣಪ್ಪ ಉಪ್ಪೂರರಿಂದಲೂ ಪ್ರೇರಣೆ ಪಡೆದಿದ್ದರು.

ಗುಂಡಬಾಳ, ಇಡಗುಂಜಿ, ಅಮೃತೇಶ್ವರಿ, ಕಮಲಶಿಲೆ, ಸಾಲಿಗ್ರಾಮ, ಬಚ್ಚಗಾರು, ಪಂಚಲಿಂಗ ಮೇಳಗಳಲ್ಲಿ ಐದು ದಶಕಗಳ ಕಲಾಸೇವೆ ಗೈದಿದ್ದರು. ಹೊನ್ನಾವರದ ಹೊಸಾಕುಳಿಯಲ್ಲಿ ತಾಳಮದ್ದಲೆಗಾಗಿಯೇ ಸ್ಥಾಪನೆಗೊಂಡ ಕಲಾವರ್ಧಕ ಸಂಘದಲ್ಲಿ ನಾಲ್ಕು ದಶಕಗಳಿಂದ ಭಾಗವತರಾಗಿದ್ದರು.

ಅದ್ಭುತ ತಾಳ, ಲಯ, ಸಿದ್ಧಿ ಪಡೆದಿದ್ದ ಇವರು, ಯಕ್ಷಗಾನದ ಮುಮ್ಮೇಳದ ಕಲಾವಿದರಿಗೆ ಅತ್ಯಂತ ಪ್ರಿಯ ಭಾಗವತರಾಗಿದ್ದರು. ಅಪಾರ ಪೌರಾಣಿಕ ಜ್ಞಾನ, ಪ್ರಸಂಗ ನಡೆಯ ಪರಿಣತಿ ಇವರದ್ದಾಗಿತ್ತು. ಯಕ್ಷಗಾನ ಗುರುಗಳಾಗಿಯೂ ಹಲವು ಕಡೆ ತರಗತಿಗಳನ್ನು ನಡೆಸಿ ಶಿಷ್ಯರನ್ನು ಸಿದ್ಧಗೊಳಿಸಿದ್ದರು. ಯಕ್ಷಗಾನ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ, ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.