ನವದೆಹಲಿ: NEET UG 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ವಿವಿಧೆಡೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ.
ಜೈಪುರದಲ್ಲಿ ಮೂವರು, ಗುರುಗ್ರಾಮ ಮತ್ತು ನಾಸಿಕ್‌ನಲ್ಲಿ ತಲಾ ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಇವರೊಂದಿಗೆ ಇನ್ನು ಕೆಲವು ಶಂಕಿತ ಆರೋಪಿಗಳನ್ನು ವಿಚಾರಣೆಗೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಿಲಾಲ್ ಬಿವಾಲ್, ವಿಕಾಸ್ ಬಿವಾಲ್ ಮತ್ತು ದಿನೇಶ್ ಬಿವಾಲ್ ಈ ಮೂವರು ಜೈಪುರ್‌ನವರಾಗಿದ್ದು, ಶುಭಂ ಖೈರ್ನರ್ ಮತ್ತು ಯಶ್ ಯಾದವ್ ಗುರುಗ್ರಾಮ್‌ದವರಾಗಿದ್ದಾರೆ ಎಂದು ತಿಳಿದುಬಂದಿದೆ.
ಎಲ್ಲ ಐವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳು ಅವರಿಂದ ಮೊಬೈಲ್ ಫೋನ್‌ಗಳು ಸೇರಿದಂತೆ ಹಲವಾರು ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಭಾರತೀಯ ನ್ಯಾಯ ಸಂಹಿತೆ, ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಸಾರ್ವಜನಿಕ ಪರೀಕ್ಷೆಗಳ ಕಾಯ್ದೆ-2024ರ ಅಡಿಯಲ್ಲಿ ಕ್ರಿಮಿನಲ್ ಪಿತೂರಿ, ವಂಚನೆ, ವಿಶ್ವಾಸದ್ರೋಹ ಸೇರಿ ವಿವಿಧ ಕಲಂಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.






















