ಕಾರವಾರ: ದೇಶದ ಅತ್ಯಂತ ಮಹತ್ವದ ರಕ್ಷಣಾ ಕೇಂದ್ರವಾಗಿರುವ ಕಾರವಾರದ ಐಎನ್‌ಎಸ್ ಕದಂಬ (ಸೀಬರ್ಡ್) ನೌಕಾನೆಲೆಗೆ ಜೂನ್ 13 ಅಥವಾ 14 ರಂದು ಅತ್ಯಾಧುನಿಕ ಯುದ್ಧನೌಕೆ ಐಎನ್‌ಎಸ್ ಮಲ್ವಾನ್ ಅಧಿಕೃತವಾಗಿ ಸೇರ್ಪಡೆಯಾಗಲಿದೆ. ಉತ್ತರ ಕನ್ನಡದ ಕಡಲತೀರದ ಗರಿಮೆ ಮತ್ತಷ್ಟು ಹೆಚ್ಚಲಿದೆ.
ಭಾರತೀಯ ನೌಕಾಪಡೆಗಾಗಿ ವಿಶೇಷವಾಗಿ ಸಿದ್ಧಗೊಳ್ಳುತ್ತಿರುವ ಎಂಟು ಆ್ಯಂಟಿ ಸಬ್‌ಮರಿನ್ ವಾರ್‌ಫೇರ್ ಶ್ಯಾಲೋ ವಾಟರ್ ಕ್ರಾಫ್ಟ್ಸ್ ಸರಣಿಯಲ್ಲಿ ಇದು ಎರಡನೇ ಯುದ್ಧನೌಕೆಯಾಗಿದೆ. ಈ ವರ್ಗದ ಮೊದಲ ನೌಕೆ ಐಎನ್‌ಎಸ್ ಅರ್ನಾಲಾ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದು, ಎರಡನೇ ಶಕ್ತಿಶಾಲಿ ನೌಕೆಯಾಗಿ ಮಲ್ವಾನ್ ಕಾರವಾರದ ಸಾಗರ ಗಡಿಯನ್ನು ಕಾಯಲು ಸಜ್ಜಾಗಿದೆ. ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಸಂಸ್ಥೆಯು ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಬಳಸಿ ನಿರ್ಮಿಸಿದ್ದು, ಈಗಾಗಲೇ ನೌಕಾಪಡೆಗೆ ಹಸ್ತಾಂತರಿಸಲಾಗಿದೆ.
ಸುಮಾರು 80 ಮೀಟರ್ ಉದ್ದ ಹಾಗೂ 1,100 ಟನ್‌ಗಳಷ್ಟು ಭಾರವನ್ನು ಸ್ಥಳಾಂತರಿಸುವ ಭಾರಿ ಸಾಮರ್ಥ್ಯ ಹೊಂದಿರುವ ಈ ಯುದ್ಧನೌಕೆಯನ್ನು ಆಳ ಸಮುದ್ರಕ್ಕೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಸಮುದ್ರದಲ್ಲಿ ಅಡಗಿಕೊಳ್ಳುವ ಶತ್ರು ಜಲಾಂತರ್ಗಾಮಿಗಳನ್ನು ಪತ್ತೆ ಹಚ್ಚಿ, ಧ್ವಂಸಗೊಳಿಸುವುದು ಇದರ ಮುಖ್ಯ ಕೆಲಸ. ಇದಕ್ಕಾಗಿ ನೌಕೆಯಲ್ಲಿ ಅತ್ಯಾಧುನಿಕ ರಾಡಾರ್ ಮತ್ತು ಸೋನಾರ್ ವ್ಯವಸ್ಥೆ, ಹಗುರ ತೂಕದ ಟಾರ್ಪಿಡೊಗಳು ಹಾಗೂ ಜಲಾಂತರ್ಗಾಮಿ ವಿರೋಧಿ ರಾಕೆಟ್‌ಗಳನ್ನು ಅಳವಡಿಸಲಾಗಿದೆ.





















