ದಾವಣಗೆರೆ: ಪಾಕಿಸ್ತಾನ ಮೂಲದ ಶಂಕಿತ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ದಾವಣಗೆರೆ ಮತ್ತು ತುಮಕೂರಿನ ಇಬ್ಬರು ಯುವಕರನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.
ನಗರದ ಬೀಡಿ ಲೇಔಟ್ ನಿವಾಸಿ ಜಮೀರ್ ಖಾನ್(22) ಮತ್ತು ತುಮಕೂರಿನ ಅಲ್ಲಾಭಕ್ಷಿ ಬಂಧಿತ ಯುವಕರು. ಇವರು ಪಾಕಿಸ್ತಾನ ಮೂಲದ ಶಂಕಿತ ಉಗ್ರರಾದ ಶಾಬಾಸ್ ಭುಟ್ಟಿ ಮತ್ತು ರಾಣಾ ಉನೇನ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗಿತ್ತು. ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ವಾಟ್ಸಾಪ್, ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಆರೋಪಿಗಳು ವಿದೇಶದಲ್ಲಿರುವ ಶಂಕಿತ ಉಗ್ರರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಹಾಗೂ ವಿಧ್ವಂಸಕ ಚಟುವಟಿಕೆಗಳಿಗೆ ನೆರವಾಗುವ ಉದ್ದೇಶದಿಂದ ಸ್ಥಳೀಯ ಯುವಕರನ್ನು ಸಂಪರ್ಕಿಸುವ ಪ್ರಯತ್ನ ನಡೆದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳ ಡಿಜಿಟಲ್ ಸಂಪರ್ಕ, ಹಣಕಾಸು ವ್ಯವಹಾರ ಹಾಗೂ ವಿದೇಶಿ ನಂಟುಗಳ ಕುರಿತು ತನಿಖೆ ಮುಂದುವರೆದಿದೆ.
ಮುಂಬೈ ಮೂಲದ ಉದ್ಯಮಿಯೊಬ್ಬರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಕುರಿತು ಆರೋಪಿಗಳಿಗೆ ಸೂಚನೆ ನೀಡಲಾಗಿತ್ತು ಎಂಬ ಮಾಹಿತಿಯನ್ನೂ ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ. ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಂಚು ರೂಪಿಸಿರುವ ಶಂಕೆಯ ಮೇರೆಗೆ ಈ ಕಾರ್ಯಾಚರಣೆ ನಡೆಸಿದ್ದು, ಅಂತಹ ಕೃತ್ಯ ನಡೆಯುವ ಮುನ್ನವೇ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






















