SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ವಾಲ್ಮೀಕಿ ಮೀಸಲಾತಿ ರಕ್ಷಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ಕಪ್ಪು ಪಟ್ಟಿ ಧರಿಸಿ ಬಿಜೆಪಿ ಆಕ್ರೋಶ

ವಾಲ್ಮೀಕಿ ಮೀಸಲಾತಿ ರಕ್ಷಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ಕಪ್ಪು ಪಟ್ಟಿ ಧರಿಸಿ ಬಿಜೆಪಿ ಆಕ್ರೋಶ

0
22
  • ಹೈಕೋರ್ಟ್‌ನಲ್ಲಿ ಮೀಸಲಾತಿ ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ನಿರ್ಲಕ್ಷ್ಯ: ಕೆ.ಟಿ. ಕುಮಾರಸ್ವಾಮಿ ವಾಗ್ದಾಳಿ

ಚಳ್ಳಕೆರೆ: ವಾಲ್ಮೀಕಿ ಸಮುದಾಯಕ್ಕೆ ನೀಡಲಾಗಿದ್ದ ಶೇ. 4ರಷ್ಟು ಹೆಚ್ಚುವರಿ ಮೀಸಲಾತಿಯನ್ನು ಹೈಕೋರ್ಟ್‌ನಲ್ಲಿ ಸಮರ್ಥಿಸಿಕೊಳ್ಳುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಸಮುದಾಯಕ್ಕೆ ದೊಡ್ಡ ದ್ರೋಹ ಬಗೆದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಕಪ್ಪು ವಸ್ತ್ರ ಹಾಗೂ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕವಾಗಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೀಸಲಾತಿ ಹೆಚ್ಚಳವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ, ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಹೈಕೋರ್ಟ್‌ನಲ್ಲಿ ಸಮರ್ಥ ವಕೀಲರನ್ನು ನೇಮಿಸಿ, ಜನಗಣತಿಗೆ ಅನುಗುಣವಾಗಿ ನ್ಯಾಯಯುತವಾಗಿ ಈ ಮೀಸಲಾತಿ ನೀಡಲಾಗಿದೆ ಎಂದು ಪ್ರಬಲ ವಾದ ಮಂಡಿಸಬೇಕಿದ್ದ ರಾಜ್ಯ ಸರ್ಕಾರ ಸಂಪೂರ್ಣವಾಗಿ ಎಡವಿದೆ. ಸರ್ಕಾರದ ಈ ವೈಫಲ್ಯದಿಂದಾಗಿಯೇ ಶೇ. 4ರಷ್ಟು ಹೆಚ್ಚುವರಿ ಮೀಸಲಾತಿ ರದ್ದಾಗಿದ್ದು, ಮತ್ತೆ ಶೇ. 3ಕ್ಕೆ ಇಳಿದಿದೆ ಎಂದು ಅವರು ಕಿಡಿಕಾರಿದರು.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಶೇ. 3.5 ರಿಂದ ಶೇ. 7.5ಕ್ಕೆ ಹೆಚ್ಚಿಸಿ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿತ್ತು. ದಶಕಗಳ ಬೇಡಿಕೆಯಾಗಿದ್ದ ಈ ಮೀಸಲಾತಿಗಾಗಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಗಳು 150ಕ್ಕೂ ಹೆಚ್ಚು ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಸಚಿವರಾಗಿದ್ದ ಬಿ. ಶ್ರೀರಾಮುಲು ಅವರು ಹೋರಾಟಕ್ಕೆ ಸ್ಪಂದಿಸಿ ಸಮಾಜಕ್ಕೆ ನ್ಯಾಯ ಒದಗಿಸಿದ್ದರು. ಇದರಿಂದ ಸಮುದಾಯದ ಮಕ್ಕಳಿಗೆ ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಉನ್ನತ ವ್ಯಾಸಂಗದಲ್ಲಿ ಬಹಳಷ್ಟು ಅನುಕೂಲವಾಗಿತ್ತು ಎಂದು ಅವರು ಸ್ಮರಿಸಿದರು.

ಇದೀಗ ಮೀಸಲಾತಿ ಕಡಿತದಿಂದಾಗಿ ವಾಲ್ಮೀಕಿ ಸಮುದಾಯದ ಯುವಕರಿಗೆ ಸರ್ಕಾರಿ ಉದ್ಯೋಗ ಹಾಗೂ ಉನ್ನತ ಶಿಕ್ಷಣದಲ್ಲಿ ತೀವ್ರ ಅನ್ಯಾಯವಾಗುತ್ತಿದೆ. ಸಮುದಾಯಕ್ಕೆ ಆಗಿರುವ ಈ ಅನ್ಯಾಯವನ್ನು ಖಂಡಿಸಿ, ವಾಲ್ಮೀಕಿ ಜಯಂತಿಯಂದೇ ಸಾಂಕೇತಿಕವಾಗಿ ಕಪ್ಪು ಪಟ್ಟಿ ಧರಿಸಿ ರಾಜ್ಯ ಸರ್ಕಾರಕ್ಕೆ ನಮ್ಮ ಪ್ರತಿಭಟನೆಯ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಕೆ.ಟಿ. ಕುಮಾರಸ್ವಾಮಿ ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಬಾಳೆಕಾಯಿ ರಾಮದಾಸ್, ಜೈಪಾಲ್, ಡಿಶ್ ಕೃಷ್ಣಪ್ಪ, ಮಂಡಿ ಶ್ರೀನಿವಾಸ್, ಮಂಜುನಾಥ್, ಓಬಳೇಶ್, ಲಾಯರ್ ಪ್ರಭಾಕರ್, ಕೀಪರ್ ಕಾಟಯ್ಯ, ಜೆ.ಕೆ. ತಿಪ್ಪೇಶ್, ಆಟೋ ಬಾಬು, ಎಲೆ ಬದ್ರಿ, ಮದಕರಿ ಪ್ರಸನ್ನ, ಬಜ್ಜಿ ಸೇರಿದಂತೆ ಹಲವು ಪ್ರಮುಖರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.