ಶಿರಸಿ: ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಶ್ರೀಪಾದ ಭಟ್ ಥಂಡಿಮನೆ (62), ಮಂಗಳೂರಿನ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.
ಮೂಲತಃ ಶಿರಸಿ ತಾಲೂಕಿನ ಥಂಡಿಮನೆಯವರಾದ ಅವರು ಯಕ್ಷಗಾನದಲ್ಲಿ ವಿಶೇಷವಾಗಿ ರಾವಣ, ಭೀಮ, ಘಟೋದ್ಗಜ, ಕಂಸ, ಕೌರವ, ಆಂಜನೇಯ, ಸಾಲ್ವ, ದಕ್ಷ, ಈಶ್ವರ, ವೀರಮಣಿ, ದುಷ್ಟಬುದ್ಧಿ, ಮಾಗಧ ಮುಂತಾದ ನಾಯಕ ಹಾಗೂ ಪ್ರತಿ ನಾಯಕನ ಪಾತ್ರ ಎರಡರಲ್ಲೂ ಹೆಸರುವಾಸಿಯಾಗಿದ್ದರು.
ಕಂಚಿನ ಕಂಠದೊಡನೆ ಅತ್ಯುತ್ತಮ ವೇಷಗಾರಿಕೆ, ನಿಲುವು, ಅಭಿನಯ, ಅದ್ಭುತ ಪಾತ್ರಚಿತ್ರಣ ಹಾಗೂ ನೃತ್ಯಗಳಿಂದ ತಮ್ಮದೇ ಆದ ಛಾಪು ಮೂಡಿಸಿದ್ದರು. ಪೆರ್ಡೂರು, ಸಾಲಿಗ್ರಾಮ ಸೇರಿದಂತೆ ಯಕ್ಷಗಾನದ ಮೇಳಗಳಲ್ಲಿ ಪಾತ್ರ ನಿರ್ವಹಿಸಿದ್ದರು.
ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.





















