ಹುಬ್ಬಳ್ಳಿ-ಧಾರವಾಡ: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣಾ ಮತ ಎಣಿಕೆ ಕಾರ್ಯವು ಬೆಳಗ್ಗೆ 8 ಗಂಟೆಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭವಾಗಿದ್ದು, ಮತಗಳ ಕಟ್ಟು ಜೋಡಿಸುತ್ತಿದ್ದಾರೆ.
ನಾಲ್ಕು ಜಿಲ್ಲೆಗಳ ಅಧಿಕಾರಿಗಳು ಮತ ಎಣಿಕೆಯಲ್ಲಿ ಭಾಗಿಯಾಗಿದ್ದು, ಚುನಾವಣಾಧಿಕಾರಿ ಕೆ.ಎಂ. ಜಾನಕಿ ಅವರ ಎದುರು ಸ್ಟ್ರಾಂಗ್ ರೂಮ್ ತೆರೆದು ಒಳ ನಡೆದಿದ್ದಾರೆ. 14 ಟೇಬಲ್ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಸಂಜೆಯೊಳಗೆ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ.
ಶೇ.75.66ರಷ್ಟು ಮತದಾನ: ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಒಟ್ಟು 97,400 ಮತದಾರರಿದ್ದು, ಅವರಲ್ಲಿ 57,345 ಪುರುಷರು ಹಾಗೂ 40,055 ಮಹಿಳಾ ಮತದಾರರಿದ್ದಾರೆ. ಅಕ್ಟೋಬರ್ 23 ರಂದು ನಡೆದ ಶಾಂತಿಯುತ ಚುನಾವಣೆಯಲ್ಲಿ ಒಟ್ಟು 73,692 ಮತಗಳು ಚಲಾವಣೆಯಾಗಿದ್ದು, ಶೇ.75.66ರಷ್ಟು ಮತದಾನವಾಗಿದೆ.
ಜಿಲ್ಲಾವಾರು ಮತದಾನದ ವಿವರ:ಧಾರವಾಡ ಜಿಲ್ಲೆಯಲ್ಲಿ 25,240 ಮತಗಳು ಚಲಾವಣೆಯಾಗಿದ್ದು, ಶೇ.71.87ರಷ್ಟು ಮತದಾನವಾಗಿದೆ. ಗದಗ ಜಿಲ್ಲೆಯಲ್ಲಿ 16,778 ಮತಗಳು ಚಲಾವಣೆಯಾಗಿದ್ದು, ಶೇ.77.70ರಷ್ಟು ಮತದಾನವಾಗಿದೆ. ಹಾವೇರಿ ಜಿಲ್ಲೆಯಲ್ಲಿ 19,401 ಮತಗಳು ಚಲಾವಣೆಯಾಗಿದ್ದು, ಶೇ.78.71ರಷ್ಟು ಮತದಾನವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 12,273 ಮತಗಳು ಚಲಾವಣೆಯಾಗಿದ್ದು, ಶೇ.76.52ರಷ್ಟು ಮತದಾನವಾಗಿದೆ.
14 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ: ಚುನಾವಣಾ ಕಣದಲ್ಲಿ 14 ಜನ ಅಭ್ಯರ್ಥಿಗಳು ಇದ್ದಾರೆ. ಕಾಂಗ್ರೆಸ್ನಿಂದ ಮೋಹನ ಲಿಂಬಿಕಾಯಿ, ಬಿಜೆಪಿಯಿಂದ ಎಸ್.ವಿ. ಸಂಕನೂರು, ಕರ್ನಾಟಕ ರಾಷ್ಚ್ರಸಮಿತಿಯಿಂದ ನಿಶಾಂತ ಶಂಕರ ಬಂಕಾಪೂರ, ಕಿತ್ತೂರು ಕಲ್ಯಾಣ ಕರ್ನಾಟಕ ಸೇನಾದಿಂದ ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ, ಜನತಾ ಚಳವಳಿ ಭಾರತ ಪಕ್ಷದಿಂದ ತಳವಾರ ಶಿವಕುಮಾರ ಮತ್ತು ಪಕ್ಷೇತರರಾಗಿ ಅಬ್ಜುಲ್ ಮನ್ನಾನ, ಡಾ. ಜಿ.ಎಚ್. ಇಮ್ರಾಪುರ, ಉಮೇಶ ಕೃಷ್ಣಪ್ಪ ದೈವಜ್ಞ, ಕೃಷ್ಣ ಎಚ್. ಬಳಿಗಾರ, ಕಾಂತಕುಮಾರ ಆರ್, ಜಿಶಾನ್ ಡಿ. ಶಿರಸಂಗಿ, ಜೀಶಾನ್ ಅಹ್ಮದಖಾನ್ ಪಠಾಣ, ಬಸವರಾಜ ಶಂಕ್ರಪ್ಪ ಕೊಟಗಿ, ಸಂತೋಷ ಮನೋಹರ ವೇರ್ಣೇಕರ ಸ್ಪರ್ಧಿಸಿದ್ದಾರೆ. ಒಟ್ಟು 14 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಪೊಲೀಸ್ ಬಂದೋಬಸ್ತ್ ವ್ಯವಸ್ಥೆ:ಮತ ಎಣಿಕೆ ಹಿನ್ನೆಲೆ ಭದ್ರತಾ ಕೊಠಡಿ ಹಾಗೂ ಮತ ಎಣಿಕೆ ಕೇಂದ್ರಕ್ಕೆ ಮೂರು ಹಂತಗಳಲ್ಲಿ ಒಟ್ಟು 212 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.




















