ದಾಂಡೇಲಿ (ಉತ್ತರ ಕನ್ನಡ): ದಸರಾ ಹಬ್ಬದ ಅಂಗವಾಗಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ವತಿಯಿಂದ ಡಿಲಕ್ಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಮಲೀಲಾ ಉತ್ಸವದ ಸಿಡಿಮದ್ದು ಪ್ರದರ್ಶನದ ವೇಳೆ ಸಂಭವಿಸಿದ ಅವಘಡದಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದಾಂಡೇಲಿಯ ಹಳಿಯಾಳ ರಸ್ತೆಯಲ್ಲಿರುವ ಮನೆಗಳ ಮೇಲ್ಛಾವಣಿ ಹಾಗೂ ಅಂಗಳಕ್ಕೆ ಸಿಡಿಮದ್ದಿನ ಕಿಡಿ ಮತ್ತು ಬೆಂಕಿ ಬಿದ್ದ ಪರಿಣಾಮ ಆರು ಮಂದಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಗಾಯಾಳುಗಳಲ್ಲಿ ಆಸ್ಮಾ ಎಂಬ ಯುವತಿಗೆ ಶೇ. 35ರಷ್ಟು ಸುಟ್ಟ ಗಾಯಗಳಾಗಿದ್ದು, ಉಳಿದ ಐವರಿಗೂ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಬೆಳಗಾವಿ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ: ಘಟನೆ ಸಂಭವಿಸಿದ ತಕ್ಷಣ ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಆಸ್ಪತ್ರೆಗೆ ಸ್ಥಳಾಂತರಿಸಿ, ಐಸಿಯು ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯವೂ ಗಾಯಾಳುಗಳಿಗೆ ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಸಂಪೂರ್ಣ ಗುಣಮುಖರಾಗಲು ಇನ್ನೂ ಹಲವು ದಿನಗಳು ಬೇಕಾಗಬಹುದು ಎನ್ನಲಾಗಿದೆ.
ಚಿಕಿತ್ಸಾ ವೆಚ್ಚ ಭರಿಸುವ ಭರವಸೆ: ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ವೆಸ್ಟ್ ಕೋಸ್ಟ್ ಪೇಪರ್ ಮಿಲ್ ವತಿಯಿಂದ ಭರಿಸುವುದಾಗಿ ಭರವಸೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ನಡೆಯುವ ರಾಮಲೀಲಾ ಉತ್ಸವದ ಸಿಡಿಮದ್ದು ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲ ಪರವಾನಗಿಗಳನ್ನು ಪಡೆಯಲಾಗಿದೆ ಎನ್ನಲಾಗಿದೆ.
ಪ್ರಕರಣ ಮುಚ್ಚಿಹಾಕುವ ಯತ್ನದ ಆರೋಪ: ಈ ಘಟನೆ ನಡೆದಿರುವ ಕುರಿತು ಸ್ಥಳೀಯರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗದಂತೆ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಮಜ್ದೂರ್ ಸಂಘದ ಕಾರ್ಮಿಕ ಮುಖಂಡ ಶಿವಾನಂದ ಗಗ್ಗರಿ ಆರೋಪ ಮಾಡಿದ್ದಾರೆ. ಇನ್ನೊಂದೆಡೆ ಗಾಯಾಳು ಕುಟುಂಭದವರು ತಮಗೆ ಸಮರ್ಪಕ ನೆರವು ದೊರೆಯುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಹೊಣೆಗಾರರು ಯಾರು? ಕ್ರಮ ಯಾವಾಗ?: ಸಾರ್ವಜನಿಕರ ವಾಸಸ್ಥಳಗಳ ಸಮೀಪ ನಡೆದ ಸಿಡಿಮದ್ದು ಪ್ರದರ್ಶನದಿಂದ ಆರು ಮಂದಿ ಸುಟ್ಟು ಗಾಯಗೊಂಡಿರುವದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ? ಸಿಡಿಮದ್ದು ಪ್ರದರ್ಶನದ ವೇಳೆ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿತ್ತೇ? ಘಟನೆಗೆ ಹೊಣೆ ಯಾರು? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವರೆಗೆ ಅಧಿಕೃತ ಕಾನೂನು ಕ್ರಮ ಜರುಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.






















