ಶಿವಮೊಗ್ಗ: ಇನ್‌ಸ್ಟಾಗ್ರಾಮ್‌ನಲ್ಲಿ ಜ್ಯೋತಿಷ್ಯದ ಜಾಹೀರಾತು ನಂಬಿದ ಯುವತಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ಜ್ಯೋತಿಷ್ಯದ ಜಾಹೀರಾತೊಂದು ಕಾಣಿಸಿತ್ತು. ಅದರಲ್ಲಿ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯಾಲಯ, ವ್ಯಕ್ತಿಯೊಬ್ಬರ ಪೋನ್ ನಂಬರ್ ಹಾಗೆಯೇ ಹೆಸರನ್ನು ನಮೂದಿಲಾಗಿತ್ತು. ಸಂತ್ರಸ್ತೆಯ ತಾಯಿಗೆ ತೀವ್ರ ಆರೋಗ್ಯ ಸಮಸ್ಯೆಗಳಿದ್ದ ಕಾರಣ, ಪರಿಹಾರ ಸಿಗಬಹುದೆಂಬ ಆಸೆಯಿಂದ ಆ ನಂಬರ್‌ಗೆ ಕರೆ ಮಾಡಿದ್ದಾರೆ. ಮೊದಲು ಕಾಣಿಕೆಯಾಗಿ 501 ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಲು ಸೂಚಿಸಿದ್ದನು.
ಅದನ್ನು ನಂಬಿದ ಯುವತಿ ತಕ್ಷಣವೇ ಗೂಗಲ್ ಪೇ ಮಾಡಿದ್ದರು. ಬಳಿಕ ಅರ್ಧ ಗಂಟೆಯ ಒಳಗೆ ವಾಪಸ್ ಕರೆ ಮಾಡಿದ ವಂಚಕರು, ನಿಮ್ಮ ತಾಯಿಗೆ ಯಾರೋ ಮಾಟ-ಮಂತ್ರ ಮಾಡಿಸಿದ್ದಾರೆ. ಅದಕ್ಕೆ ತಕ್ಷಣ ದೊಡ್ಡ ಪೂಜೆ ಮಾಡದಿದ್ದರೆ ಪ್ರಾಣಕ್ಕೆ ಕುತ್ತು ಬರಲಿದೆ ಎಂದು ಭಯ ಹುಟ್ಟಿಸಿ, ಪೂಜೆಯ ವೆಚ್ಚವಾಗಿ 25,000 ಬೇಡಿಕೆಯಿಟ್ಟಾಗ, ತಾಯಿಯ ಜೀವ ಉಳಿದರೆ ಸಾಕೆಂದು ಯುವತಿ ಅವರು ಹೇಳಿದ ಫೋನ್ ಪೇ ನಂಬರ್‌ಗೆ ಹಣ ಕಳುಹಿಸಿದ್ದಾರೆ.
ಬಳಿಕ ಇಬ್ಬರ ಫೋಟೋಗಳನ್ನು ವಾಟ್ಸಪ್‌ಗೆ ತರಿಸಿಕೊಂಡ ಗುರೂಜಿ, ಪೂಜೆ ಮಾಡುತ್ತಿರುವ ನಕಲಿ ಫೋಟೊಗಳನ್ನು ಕಳುಹಿಸಿ ಹಂತ ಹಂತವಾಗಿ ಒಟ್ಟು 1,84,302 ಹಣವನ್ನು ವಿವಿಧ ಮೊಬೈಲ್ ನಂಬರ್‌ಗಳಿಗೆ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಸೈಬರ್ ಠಾಣೆ ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ.






















