ಶಿವಮೊಗ್ಗ: ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಯುವಕನೊಬ್ಬ ಶಿವಮೊಗ್ಗ ನಗರದ ಹೊರವಲಯದ ಪುರಲೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸಂಕೇತ್ (19) ಆತ್ಮಹತ್ಯೆಗೆ ಶರಣಾದ ಯುವಕ. ಇತ್ತೀಚೆಗಷ್ಟೇ ತನ್ನ ಐಟಿಐ ವ್ಯಾಸಂಗ ಮುಗಿಸಿದ್ದನು. ಆದರೆ ಮುಂದೆ ಯಾವುದೇ ಕೆಲಸಕ್ಕೆ ಸೇರದೆ ಮನೆಯಲ್ಲೇ ಉಳಿದಿದ್ದನು. ಈ ಕಾರಣದಿಂದಾಗಿ ಆತನ ತಂದೆಯು ಕೆಲಸಕ್ಕೆ ಹೋಗುವಂತೆ ಮಗನಿಗೆ ಬುದ್ಧಿವಾದ ಹೇಳಿದ್ದರು. ಇದೇ ವಿಚಾರಕ್ಕೆ ಬೇಸತ್ತ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಘಟನೆಯು ಮೂರು ದಿನಗಳ ಹಿಂದೆಯೇ ಸಂಭವಿಸಿದೆ ಎನ್ನಲಾಗಿದ್ದು, ಸೋಮವಾರ ಪುರಲೆ ಕೆರೆಯಲ್ಲಿ ಯುವಕನ ಶವ ತೇಲುತ್ತಿರುವುದು ಪತ್ತೆಯಾಗಿದೆ. ಸ್ಥಳೀಯ ನಿವಾಸಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.






















