ಶಿವಮೊಗ್ಗ(ತೀರ್ಥಹಳ್ಳಿ): ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ ನಾಲ್ವರು ಯುವಕರು ತುಂಗಾ ನದಿಯಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆದ್ದೂರು ಸಮೀಪದ ಮಹಿಷಿ ಗ್ರಾಮದಲ್ಲಿ ಸಂಭವಿಸಿದೆ.
ಕಾನೂನು ವಿದ್ಯಾರ್ಥಿಗಳಾದ ಬೆಂಗಳೂರಿನ ಕತ್ರಿಗುಪ್ಪೆ ನಿವಾಸಿಗಳಾದ ಕಾರ್ತಿಕ್ (31), ನಕುಲ್ (19), ಪವನ್ (30) ಹಾಗೂ ಖಾಸಗಿ ಕಂಪನಿಯ ಉದ್ಯೋಗಿ ಚೇತನ್ (19) ನಾಪತ್ತೆಯಾದವರು.
ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ನಾಲ್ವರು, ಬಳಿಕ ಪ್ರವಾಸಿ ತಾಣಕ್ಕೆ ತೆರಳಲು ನಿರ್ಧರಿಸಿದ್ದರು. ಗೂಗಲ್ ಮೂಲಕ ಸ್ಥಳ ಹುಡುಕಿಕೊಂಡು ಎರಡು ಟಿಟಿ ವಾಹನಗಳಲ್ಲಿ ಮಹಿಷಿ ಗ್ರಾಮದ ಅಶ್ವತ್ಥನಾರಾಯಣ ದೇವಸ್ಥಾನದ ಬಳಿ ತಲುಪಿದ್ದರು.
ಸಂಜೆ ದೇವಸ್ಥಾನದ ಹಿಂಭಾಗದಲ್ಲಿರುವ ತುಂಗಾ ನದಿಯ ದಡದಲ್ಲಿ ಕಾಲ ಕಳೆಯುತ್ತಿದ್ದ ಯುವಕರ ಪೈಕಿ ಒಬ್ಬಾತ ಈಜಲು ನೀರಿಗಿಳಿದಿದ್ದಾನೆ. ಆದರೆ, ಆತ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗುತ್ತಿರುವುದನ್ನು ಗಮನಿಸಿದ ಇತರ ಮೂವರು ಆತನನ್ನು ರಕ್ಷಿಸಲು ನದಿಗೆ ಇಳಿದಿದ್ದಾರೆ. ದುರದೃಷ್ಟವಶಾತ್, ನಾಲ್ವರೂ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ನದಿಯಲ್ಲಿ ನಾಲ್ವರು ಯುವಕರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.





















