SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ಮುಂದಿನ ಸಿಎಂ ವಿಜಯೇಂದ್ರ ಹೇಳಿಕೆಯೇ ಸಮಸ್ಯೆ

ಮುಂದಿನ ಸಿಎಂ ವಿಜಯೇಂದ್ರ ಹೇಳಿಕೆಯೇ ಸಮಸ್ಯೆ

0
78

ಚಿತ್ರದುರ್ಗ: ಪಕ್ಷದ ಒಳಬೇಗುದಿಗೆ ಶಾಸಕ ಚಂದ್ರಪ್ಪ ಅವರ ಮುಂದಿನ ಸಿಎಂ ವಿಜಯೇಂದ್ರ ಹೇಳಿಕೆಯೇ ಕಾರಣವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾರ್ಮಿಕವಾಗಿ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಯಾರು ಮುಂದೆ ಸಿಎಂ ಆಗಬೇಕೆಂಬುದು ಈಗ ಮುಖ್ಯವಲ್ಲ. ರಾಜ್ಯ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಮೊದಲು ಮತದಾರರಿಗೆ ನಮ್ಮ ಮೇಲೆ ವಿಶ್ವಾಸ ಬರಬೇಕು. ಕಾರ್ಯಕರ್ತರಿಗೆ ಮುಖಂಡರ ಮೇಲೆ ನಂಬಿಕೆ ಬರಬೇಕು ಎಂದು ಹೇಳಿದರು.

“ಜನಗಳು ನಮ್ಮ ಮೇಲೆ ವಿಶ್ವಾಸವಿಟ್ಟು ಬೆಂಬಲಿಸುತ್ತಾರೆ. ನಮ್ಮ ಸರ್ಕಾರ ಬರುವುದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮ ಹಗರಣದಿಂದ ಲೂಟಿಯಲ್ಲಿ ಮುಳುಗಿದೆ. ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಆರೋಪಿಸಿದರು.

“ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಕಿಡಿಕಾರಿದ ಅವರು, ನೇಹಾ ಹತ್ಯೆ, ದಲಿತ ಮಹಿಳೆ ಹತ್ಯೆ ನಡೆದಿದೆ. ಹಾವೇರಿಯಲ್ಲಿ ಮರಾಠ ಸಮಾಜದ ವ್ಯಕ್ತಿ ಹತ್ಯೆ, ಹಾಲುಮತದ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಆದರೆ ಹಿಂದೂಗಳ ಮೇಲೆ ದೌರ್ಜನ್ಯ ಎಸಗಿದವರ ಹೆಡೆಮುರಿ ಕಟ್ಟುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ” ಎಂದು ದೂರಿದರು.

ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಅಲ್ಲ. ಆದರೆ ಭಾರತ ವಿರೋಧಿಗಳನ್ನು, ಪಾಕಿಸ್ತಾನ್ ಜಿಂದಾಬಾದ್ ಎನ್ನುವವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದರು. ಪುನೀತ್ ಕೆರೆಹಳ್ಳಿ ವಿಚಾರ ಪ್ರಸ್ತಾಪಿಸಿದ ಅವರು, ಅವರು ಪ್ರಾಮಾಣಿಕ ಹಿಂದೂ ಕಾರ್ಯಕರ್ತ. ಅವರಿಗೆ ಬೆದರಿಕೆ ಹಾಕಿದವನ ವಿರುದ್ಧ ಕ್ರಮ ಕೈಗೊಳ್ಳದೆ, ಪುನೀತ್ ವಿರುದ್ಧವೇ ದೂರು ದಾಖಲಿಸಿ ಬಂಧಿಸಿದ್ದಾರೆ. ನರಸತ್ತ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಅಯೋಧ್ಯೆಯಲ್ಲಿ ನಡೆದ ಕಳ್ಳತನ ಪ್ರಕರಣದ ಬಗ್ಗೆ ಮಾತನಾಡಿದ ವಿಜಯೇಂದ್ರ, ಈ ವಿಚಾರಕ್ಕೆ ಪ್ರಧಾನಿ ಮೋದಿ ರಾಜೀನಾಮೆ ಕೇಳಿದ ಹರಿಪ್ರಸಾದ್ ಅವರಿಗೆ ನನ್ನ ಸವಾಲು. ರಾಹುಲ್, ಸೋನಿಯಾ ಅವರೇ ರಾಜೀನಾಮೆ ಕೊಡಲಿ. ನ್ಯಾಷನಲ್ ಹೆರಾಲ್ಡ್ ಸಂಸ್ಥೆಯಲ್ಲಿ ಐದು ಸಾವಿರ ಕೋಟಿಗೂ ಹೆಚ್ಚು ಲೂಟಿ ಮಾಡಿ ಜಾಮೀನಿನ ಮೇಲೆ ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಯೋಧ್ಯೆ ಪ್ರಕರಣವನ್ನು ಸಿಬಿಐಗೆ ಕೊಡಲು ಕಾಂಗ್ರೆಸ್ ಈಗ ಆಗ್ರಹಿಸುತ್ತಿದೆ. ವಾಲ್ಮೀಕಿ ನಿಗಮ ಹಗರಣ, ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಿಬಿಐ ಬೇಡವೆಂದಿದ್ದು ಇವರೇ. ಈಗ ರಾತೋರಾತ್ರಿ ಸಿಬಿಐ ಮೇಲೆ ನಂಬಿಕೆ ಬಂದಿದೆ ಎಂದು ವ್ಯಂಗ್ಯವಾಡಿದರು.

ಅಯೋಧ್ಯೆ ಪ್ರಕರಣದಲ್ಲಿ ಸಿಎಂ ಯೋಗಿ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಹಿಂದೂಗಳ ಮೇಲೆ ದೌರ್ಜನ್ಯ ಮಾಡುವವರನ್ನು ಒದ್ದು ಒಳಗೆ ಹಾಕಬೇಕು. ಅದನ್ನು ಬಿಟ್ಟು ಇಲ್ಲಿ ರಾಜ್ಯದ ಜನರ ಹಣ ಲೂಟಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ರಾಜ್ಯದ ಜನರು ಕಾಂಗ್ರೆಸ್ ಆಡಳಿತಕ್ಕೆ ಶಾಪ ಹಾಕುತ್ತಿದ್ದಾರೆ. ಹೊಸ ಮುಖ್ಯಮಂತ್ರಿ ಬಂದಿದ್ದಾರೆ ಎಂದು ಮೆರೆಯುತ್ತಿದ್ದಾರೆ. ಆದರೆ, ಆರುವ ದೀಪ ಜೋರಾಗಿ ಉರಿಯುತ್ತದೆ ಎಂದರು.

ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಜನರ ಬೆಂಬಲದಿಂದ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.