SK Home Ad
Home ಸುದ್ದಿ ದೇಶ ಸಮೋಸಾ ಖರೀದಿಗಾಗಿ ರೈಲು ನಿಲುಗಡೆ: ವೈರಲ್ ಪೋಸ್ಟ್‌ಗೆ ಇಲಾಖೆ ಸ್ಪಷ್ಟನೆ

ಸಮೋಸಾ ಖರೀದಿಗಾಗಿ ರೈಲು ನಿಲುಗಡೆ: ವೈರಲ್ ಪೋಸ್ಟ್‌ಗೆ ಇಲಾಖೆ ಸ್ಪಷ್ಟನೆ

0
54

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ “ಲೋಕೋ ಪೈಲಟ್ ಸಮೋಸಾ ಖರೀದಿಸಿಲು ರೈಲು ನಿಲ್ಲಿಸಿದರು” ಎಂಬ ಪೋಸ್ಟ್‌ಗೆ ಭಾರತೀಯ ರೈಲ್ವೆ ಸ್ಪಷ್ಟನೆ ನೀಡಿದ್ದು, ಈ ಹೇಳಿಕೆ ಸಂಪೂರ್ಣ ಸುಳ್ಳು ಮತ್ತು ದಾರಿತಪ್ಪಿಸುವಂತದ್ದು ಎಂದು ತಿಳಿಸಿದೆ.

ವೈರಲ್ ವಿಡಿಯೊದಲ್ಲಿ ರೈಲು ನಿಲ್ದಾಣದ ಬಳಿ ನಿಂತಿದ್ದ ರೈಲಿನಿಂದ ಸಿಬ್ಬಂದಿಯೊಬ್ಬರು ಕೆಳಗಿಳಿದು ಆಹಾರ ಪದಾರ್ಥ ಖರೀದಿಸುತ್ತಿರುವ ದೃಶ್ಯ ಕಂಡುಬಂದಿತ್ತು. ಈ ವಿಡಿಯೊವನ್ನು ಹಲವರು “ಪ್ರಯಾಣಿಕರ ರೈಲನ್ನು ಊಟಕ್ಕಾಗಿ ನಿಲ್ಲಿಸಲಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ, ಭಾರತೀಯ ರೈಲ್ವೆಯು ಈ ಕುರಿತು ಅಧಿಕೃತ ಸ್ಪಷ್ಟನೆ ನೀಡಿದ್ದು, ವೈರಲ್ ಆಗಿರುವ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದು ಪ್ರಯಾಣಿಕರ ರೈಲು ಅಲ್ಲ, ಬದಲಾಗಿ ಸರಕು ರೈಲು ಎಂದು ತಿಳಿಸಿದೆ.

ಏನಿದು ನಿಜವಾದ ಘಟನೆ? : ರೈಲ್ವೆಯ ಪ್ರಕಾರ, ಲೋಕೋ ಸಂಖ್ಯೆ 27237 ಮತ್ತು 27600 ಮೂಲಕ ಸಾಗುತ್ತಿದ್ದ ಸರಕು ರೈಲು (ಕಾನ್ಕಾರ್ ಗ್ರೀನ್ ಫೀಲ್ಡ್ ಪ್ರೈವೇಟ್ ಟರ್ಮಿನಸ್) ಅನ್ನು RAU ಯಾರ್ಡ್‌ನಲ್ಲಿ ನಡೆಯುತ್ತಿದ್ದ ನಿಗದಿತ ಎಂಜಿನಿಯರಿಂಗ್ ಕಾಮಗಾರಿಯ ಕಾರಣದಿಂದಾಗಿ RAU ಹೋಮ್ ಸಿಗ್ನಲ್‌ನಲ್ಲಿ ನಿಲ್ಲಿಸಲಾಗಿತ್ತು.

ಈ ನಿಗದಿತ ಕಾರ್ಯಾಚರಣಾ ನಿಲುಗಡೆಯ ವೇಳೆ ಸಹಾಯಕ ಲೋಕೋ ಪೈಲಟ್ (ALP) ವೈಯಕ್ತಿಕವಾಗಿ ಆಹಾರವನ್ನು ಖರೀದಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿತ್ತು. ಆದರೆ, ಈ ವೈಯಕ್ತಿಕ ಕೃತ್ಯವನ್ನು ತಪ್ಪಾಗಿ ನಿರೂಪಿಸಿ, “ರೈಲನ್ನೇ ಸಮೋಸಾ ಖರೀದಿಸಿಲು ನಿಲ್ಲಿಸಲಾಗಿದೆ” ಎಂಬ ಸುಳ್ಳು ಮಾಹಿತಿ ಹರಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಪ್ರಯಾಣಿಕರ ರೈಲು ಎಂದು ತಪ್ಪು ಮಾಹಿತಿ : ವೈರಲ್ ಪೋಸ್ಟ್‌ನಲ್ಲಿ ಈ ಘಟನೆ ಪ್ರಯಾಣಿಕರ DEMU ರೈಲಿಗೆ ಸಂಬಂಧಿಸಿದೆ ಎಂದು ಹೇಳಲಾಗಿತ್ತು. ಆದರೆ, ಘಟನೆಯು ಸಂಪೂರ್ಣವಾಗಿ ಸರಕು ರೈಲಿಗೆ ಸಂಬಂಧಿಸಿದ್ದಾಗಿದೆ. ಇದನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ತಪ್ಪು ಮಾಹಿತಿಯಿಂದ ಸಾರ್ವಜನಿಕರಲ್ಲಿ ಗೊಂದಲ : ಆಯ್ದ ಸಂಪಾದನೆ, ತಪ್ಪು ನಿರೂಪಣೆ ಹಾಗೂ ಸುಳ್ಳು ಮಾಹಿತಿಯ ಪ್ರಸಾರದಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗುವುದರ ಜೊತೆಗೆ ಸರ್ಕಾರಿ ಸಂಸ್ಥೆಗಳ ಮೇಲಿನ ನಂಬಿಕೆಗೆ ಧಕ್ಕೆಯಾಗುತ್ತದೆ ಎಂದು ರೈಲ್ವೆ ಇಲಾಖೆ ಎಚ್ಚರಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾಹಿತಿ ಅಥವಾ ವಿಡಿಯೊಗಳನ್ನು ಹಂಚಿಕೊಳ್ಳುವ ಮುನ್ನ ಅಧಿಕೃತ ಮೂಲಗಳ ಮೂಲಕ ಸತ್ಯಾಂಶವನ್ನು ಪರಿಶೀಲಿಸಬೇಕು. ದಾರಿತಪ್ಪಿಸುವ ಮಾಹಿತಿ ಹಾಗೂ ಸುಳ್ಳು ಸುದ್ದಿಗಳನ್ನು ನಂಬಬಾರದು ಮತ್ತು ಪ್ರಸಾರ ಮಾಡಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

https://x.com/SamyuktaKarnatk/status/2074803193763238148