SK Home Ad
Home ನಮ್ಮ ಜಿಲ್ಲೆ ಶಿವಮೊಗ್ಗ ಚಿರತೆಗೆ ಎಂಆರ್‌ಐ ಸ್ಕ್ಯಾನಿಂಗ್

ಚಿರತೆಗೆ ಎಂಆರ್‌ಐ ಸ್ಕ್ಯಾನಿಂಗ್

0
258

ಶಿವಮೊಗ್ಗ: ನಗರದ ನಂಜಪ್ಪ ಆಸ್ಪತ್ರೆಗೆ ಶುಕ್ರವಾರ ತಡರಾತ್ರಿ ಲಯನ್ ಸಫಾರಿಯ ಚಿರತೆಯೊಂದನ್ನು ಎಂಆರ್‌ಐ ಸ್ಕ್ಯಾನಿಂಗ್‌ಗೆ ತಂದ ಅಪರೂಪದ ಘಟನೆ ನಡೆದಿದೆ.

ಈ ಬಗ್ಗೆ ಮಾಹಿತಿ ನೀಡಿದ ವನ್ಯಜೀವಿ ವಿಭಾಗದ ಡಿಎಫ್‌ಒ ಡಾ. ಅಮರಾಕ್ಷರ್, ಲಯನ್ ಸಫಾರಿಯಲ್ಲಿ ಭದ್ರಾ ಎನ್ನುವ 14 ವರ್ಷದ ಚಿರತೆ ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಕುಂಟುತ್ತಾ ನಡೆಯುತ್ತಿತ್ತು. ಮೊನ್ನೆಯಿಂದ ಎದ್ದು ನಿಲ್ಲದ ಸ್ಥಿತಿಯಲ್ಲಿತ್ತು. ತಕ್ಷಣ ನಾವು ಅದನ್ನು ಉಳಿಸುವ ನಿಟ್ಟಿನಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಮೂಲಕ ಅದರ ಆರೋಗ್ಯದ ಮಾಹಿತಿ ತಿಳಿಯಲು ಶುಕ್ರವಾರ ರಾತ್ರಿ ನಗರದ ನಂಜಪ್ಪ ಆಸ್ಪತ್ರೆಗೆ ಕರೆದುಕೊಂಡು ಬಂದು ಎಂಆರ್‌ಐ ಮಾಡಿಸಿದ್ದೇವೆ ಎಂದರು.

ಸಾಮಾನ್ಯವಾಗಿ ಚಿರತೆಗಳು ಕಾಡಲ್ಲಿ 8 ರಿಂದ 12 ವರ್ಷ ಬದುಕುತ್ತವೆ. ಆದರೆ ಪ್ರಾಣಿ ಸಂಗ್ರಹಾಲಯದಲ್ಲಿ ಕಾಲ ಕಾಲಕ್ಕೆ ಅದಕ್ಕೆ ಎಲ್ಲಾ ರೀತಿಯ ಚಿಕಿತ್ಸೆ ಮತ್ತು ಆಹಾರ ದೊರೆಯುವುದರಿಂದ 15 ವರ್ಷದವರೆಗೆ ಬದುಕುತ್ತವೆ. ಈ ಚಿರತೆಗೆ ಇತ್ತೀಚೆಗೆ ಮೇಲೇಳಲು ಕಷ್ಟವಾಗುತ್ತಿತ್ತು. ಶಿವಮೊಗ್ಗದಲ್ಲಿ ಪಶು ವೈದ್ಯಕೀಯ ಕಾಲೇಜಿನಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯ ಇಲ್ಲದ ಕಾರಣ ಅನಿವಾರ್ಯವಾಗಿ ನಾವು ಇಲ್ಲಿಗೆ ಕರೆದುಕೊಂಡು ಬಂದಿದ್ದೇವೆ. ಎಂಆರ್‌ಐ ಸ್ಕ್ಯಾನಿಂಗ್ ಬಹು ದುಬಾರಿಯಾಗಿದ್ದು, ಪಶುವೈದ್ಯಕೀಯ ಕಾಲೇಜಿನಲ್ಲಿ ಆ ಸೌಲಭ್ಯ ಇರಲಿಲ್ಲ. ಸಾಮಾನ್ಯವಾಗಿ ಮನುಷ್ಯರ ಮತ್ತು ಪ್ರಾಣಿಗಳ ದೇಹರಚನೆ ಒಂದೇ ರೀತಿ ಇದ್ದು ಪಶುವೈದ್ಯರ ನೆರವಿನೊಂದಿಗೆ ಅವರ ಸಮ್ಮುಖದಲ್ಲೇ ಈ ಸ್ಕ್ಯಾನಿಂಗ್ ಮಾಡಲಾಗಿದೆ ಎಂದರು.