ರಾಯಚೂರು: ಪೆಟ್ರೋಲ್ ಬಂಕ್‌ನಲ್ಲಿ ಚಿಲ್ಲರೆ ಹಣಕ್ಕೆ ಶುರವಾದ ಜಗಳ ಬಿಡಿಸಲು ಬಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.
ಗಿಲ್ಲೆಸೂಗೂರು ಗ್ರಾಮದ ನಿವಾಸಿಯಾದ ಗ್ರಾಪಂ ಮಾಜಿ ಅಧ್ಯಕ್ಷ ಮೇಘನಾಥ ನಾಯಕ (42) ಕೊಲೆಯಾದ ನತದೃಷ್ಟನಾಗಿದ್ದಾನೆ. ಮೃತನ ಸ್ನೇಹಿತ ಹಾಗೂ ಪೆಟ್ರೋಲ್ ಬಂಕ್ ಸಿಬ್ಬಂದಿ ನಡುವೆ 10 ರೂಪಾಯಿ ಚಿಲ್ಲರೆ ಹಣಕ್ಕಾಗಿ ಜಗಳ ಶುರುವಾಗಿದ್ದು, ಈ ವೇಳೆ ಸ್ನೇಹಿತ ಕರೆದಿದ್ದರಿಂದ ಬಂದು ಜಗಳ ಬಿಡಿಸಲು ಪ್ರಯತ್ನಿಸಿದ ವ್ಯಕ್ತಿಯೇ ಕೊಲೆಯಾದ ಧಾರುಣ ಘಟನೆ ಸಂಭವಿಸಿದೆ.
ಈ ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಸಂಬಂಧಿಗಳು ಹಾಗೂ ಗ್ರಾಮಸ್ಥರು ಪೆಟ್ರೋಲ್ ಬಂಕ್‌ಗೆ ಧಾವಿಸಿದ್ದು, ಗಾಯಗೊಂಡಿದ್ದ ಮೇಘನಾಥನನ್ನು ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸುವ ಪ್ರಯತ್ನ ಮಾಡಿದರೂ ಫಲಕಾರಿಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕೊಲೆ ಸಂಬಂಧ ಆರೋಪಿಗಳಾದ ರವಿ, ವೀರೇಶ, ನರಸಿಂಹ, ಮಾರೆಪ್ಪ ಸೇರಿದಂತೆ ಆರು ಜನರ ವಿರುದ್ಧ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.






















