ಬೆಳಗಾವಿ: ಮಹಾರಾಷ್ಟ್ರದ ಕೊಯ್ನಾ, ಮಹಾಬಳೇಶ್ವರ, ಕೊಂಕಣ ಹಾಗೂ ಸಹ್ಯಾದ್ರಿ ಘಟ್ಟ ಪ್ರದೇಶಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ಕೃಷ್ಣಾ ಹಾಗೂ ದೂಧಗಂಗಾ ನದಿಗಳು ಅಪಾಯ ಮಟ್ಟದತ್ತ ಹರಿಯುತ್ತಿವೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಸುಮಾರು 1,34,207 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಗಡಿಭಾಗದ ಹಲವು ಸೇತುವೆಗಳು ಜಲಾವೃತಗೊಂಡು ಜನಜೀವನದ ಮೇಲೆ ಪರಿಣಾಮ ಬೀರಿದೆ.
ಉಗಾರ- ಕುಡಚಿ ಸಂಪರ್ಕ ಸೇತುವೆಯ ಮೇಲೆ ಸುಮಾರು ಮೂರು ಅಡಿ ನೀರು ಹರಿಯುತ್ತಿರುವುದರಿಂದ ಬುಧವಾರ ತಡರಾತ್ರಿಯಿಂದಲೇ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅದೇ ರೀತಿ ಸದಲಗಾ-ಬೋರಗಾಂವ ಹಾಗೂ ಯಕ್ಸಂಬಾ-ದಾನವಾಡ ಸೇತುವೆಗಳು ಮುಳುಗಡೆಯ ಹಂತ ತಲುಪಿದ್ದು, ವೇದಗಂಗಾ, ದೂಧಗಂಗಾ ಮತ್ತು ಕೃಷ್ಣಾ ನದಿಗಳ ಕೆಳಹಂತದ ಹಲವು ಬ್ಯಾರೇಜ್‌ಗಳೂ ಜಲಾವೃತಗೊಂಡಿವೆ. ಪೊಲೀಸರು ಎರಡೂ ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಸಂಚಾರ ನಿರ್ಬಂಧಿಸಿದ್ದಾರೆ.
ಸೇತುವೆಗಳು ಮುಳುಗಡೆಯಾಗಿರುವುದರಿಂದ ಕರ್ನಾಟಕ – ಮಹಾರಾಷ್ಟ್ರ ನಡುವಿನ ಸಂಪರ್ಕಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಹಾರೂಗೇರಿ, ಕಾಗವಾಡ, ಅಥಣಿ, ಜಮಖಂಡಿ, ಮಹಾಲಿಂಗಪುರ ಸೇರಿದಂತೆ ವಿವಿಧ ಪ್ರದೇಶಗಳ ಜನರು ಪರ್ಯಾಯ ಮಾರ್ಗ ಬಳಸಬೇಕಾಗಿದ್ದು, ಸುಮಾರು 50 ಕಿ.ಮೀ. ಹೆಚ್ಚುವರಿ ಸುತ್ತುವರಿದು ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನದಿತೀರದ ತಗ್ಗು ಪ್ರದೇಶಗಳ ಕೃಷಿಭೂಮಿಗಳಿಗೂ ನೀರು ನುಗ್ಗಿ ಬೆಳೆ ಹಾನಿಯ ಆತಂಕ ಎದುರಾಗಿದೆ.
ಮುಂದಿನ ದಿನಗಳಲ್ಲೂ ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದರೆ ಪ್ರವಾಹದ ತೀವ್ರತೆ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಡೂರ, ಅಂಕಲಿ, ಕಲ್ಲೋಳ, ಮಾಂಜರಿ, ಇಂಗಳಿ, ಸದಲಗಾ ಸೇರಿದಂತೆ ನದಿತೀರದ ಹಲವು ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪರಿಸ್ಥಿತಿಯ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದ್ದು, ನದಿತೀರದ ಜನರು ಅನಗತ್ಯವಾಗಿ ನದಿ ಹಾಗೂ ಮುಳುಗಡೆಯಾದ ಸೇತುವೆಗಳ ಬಳಿ ತೆರಳದಂತೆ ಸೂಚಿಸಲಾಗಿದೆ.





















