ಸಿಂಧನೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ವಿವಿಧ ಆರೋಪಗಳನ್ನು ಮುಂದಿಟ್ಟು ಕರ್ನಾಟಕ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಇಂದು ರಾಯಚೂರು ಜಿಲ್ಲೆಯ ಸಿಂಧನೂರಿನಿಂದ ಕೊಪ್ಪಳ ಜಿಲ್ಲೆಯ ಕಾರಟಗಿ ಕಡೆಗೆ ಮುಂದುವರಿಯಿತು. ಇಂದಿನ ಹಂತದಲ್ಲಿ ಸುಮಾರು 22ರಿಂದ 26 ಕಿ.ಮೀ. ಪಾದಯಾತ್ರೆ ನಡೆಯಲಿದೆ ಎಂದು ವರದಿಯಾಗಿದೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಪಾದಯಾತ್ರೆ ಆರಂಭಕ್ಕೂ ಮುನ್ನ ಗೋಪೂಜೆ ನೆರವೇರಿಸಲಾಯಿತು. ಅಧರ್ಮವನ್ನು ಅಳಿಸಿ ಧರ್ಮವನ್ನು ಸ್ಥಾಪಿಸಲು ಯುಗಯುಗದಲ್ಲಿ ಅವತರಿಸುವ ಶ್ರೀಕೃಷ್ಣನನ್ನು ಸ್ಮರಿಸಿ, ಗೋಪಾಲಕನಾದ ಶ್ರೀಕೃಷ್ಣನ ಪ್ರೀತ್ಯರ್ಥವಾಗಿ ಗೋಪೂಜೆ ನಡೆಸಲಾಯಿತು.
ಬಳಿಕ ಮಾತನಾಡಿದ ವಿಜಯೇಂದ್ರ, ‘ಬಳ್ಳಾರಿ ಚಲೋ’ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಹೋರಾಟವಾಗಿದೆ ಎಂದು ಹೇಳಿದರು. ರಾಜ್ಯದ ಬಡವರು, ರೈತರು, ಕೃಷಿ ಕಾರ್ಮಿಕರು ಹಾಗೂ ದುರ್ಬಲ ವರ್ಗದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅವರು ಆರೋಪಿಸಿದರು. ಸಾಮಾಜಿಕ ಭದ್ರತಾ ಪಿಂಚಣಿ, ಬಡವರ ಮನೆ, ರೈತರ ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಾಲ್ಕನೇ ದಿನದ ಪಾದಯಾತ್ರೆಯಲ್ಲಿ ವಿಶಿಷ್ಟಚೇತನರು ಹಾಗೂ ಹಿರಿಯ ನಾಗರಿಕರ ಪಿಂಚಣಿ ಸಮಸ್ಯೆಗಳೊಂದಿಗೆ ಆಗಮಿಸಿದ್ದವರನ್ನು ವಿಜಯೇಂದ್ರ ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿದರು. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೋರಾಟ ನಡೆಸುವುದಾಗಿ ಭರವಸೆ ನೀಡಿ ಧೈರ್ಯ ತುಂಬಿದರು.
ಇದೇ ವೇಳೆ ಸಿಂಧನೂರಿನಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಬಾಂಧವರು ವಿಜಯೇಂದ್ರ ಅವರನ್ನು ಆತ್ಮೀಯವಾಗಿ ಭೇಟಿ ಮಾಡಿ, ಬಿಜೆಪಿಯ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪಾದಯಾತ್ರೆಗೆ ಶುಭ ಹಾರೈಸಿದರು. ಸಮಾಜದ ಎಲ್ಲ ವರ್ಗಗಳ ಜನರನ್ನು ಒಳಗೊಂಡು ಹೋರಾಟ ನಡೆಸುವುದಾಗಿ ಬಿಜೆಪಿ ನಾಯಕರು ಪ್ರತಿಪಾದಿಸಿದರು.
ಇಂದಿನ ಪಾದಯಾತ್ರೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ. ಶ್ರೀರಾಮುಲು, ಶಾಸಕ ಸುನಿಲ್ ಕುಮಾರ್, ಶಾಸಕ ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಹಲವು ಹಿರಿಯ ನಾಯಕರು, ಶಾಸಕರು, ಮುಖಂಡರು ಹಾಗೂ ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದಾರೆ. ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಸಾವಿರಾರು ಬಿಜೆಪಿ ಕಾರ್ಯಕರ್ತರು ಪಾದಯಾತ್ರೆಗೆ ಸಾಥ್ ನೀಡಿದ್ದಾರೆ.
ಸಾಮಾಜಿಕ ಭದ್ರತಾ ಪಿಂಚಣಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನ, ಅತಿಥಿ ಉಪನ್ಯಾಸಕರ ವೇತನ ಸೇರಿದಂತೆ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರ ವಿಫಲವಾಗಿದೆ ಎಂಬುದು ಬಿಜೆಪಿಯ ಪ್ರಮುಖ ಆರೋಪವಾಗಿದೆ. ಗಂಗಾ ಕಲ್ಯಾಣ ಯೋಜನೆ ಹಾಗೂ ಬಡವರಿಗೆ ಮನೆ ಒದಗಿಸುವ ವಿಚಾರದಲ್ಲಿಯೂ ಸರ್ಕಾರದ ವಿರುದ್ಧ ವಿಜಯೇಂದ್ರ ಆರೋಪಗಳನ್ನು ಮಾಡಿದ್ದಾರೆ.
ರಾಯಚೂರಿನಿಂದ ಆರಂಭವಾಗಿರುವ ಈ 10 ದಿನಗಳ ‘ಬಳ್ಳಾರಿ ಚಲೋ’ ಪಾದಯಾತ್ರೆ ಸೆಪ್ಟೆಂಬರ್ 10ರಂದು ಬಳ್ಳಾರಿ ತಲುಪುವ ಉದ್ದೇಶ ಹೊಂದಿದೆ. ಪಾದಯಾತ್ರೆ ಮುಂದುವರಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















