ರಾಯಚೂರು: ಅಧಿಕಾರದ ಮದದಲ್ಲಿ ರೈತರಿಗೆ ಸ್ಪಂದಿಸದ ಹಾಗೂ ರೈತರ, ಪ್ರಗತಿ ವಿರೋಧಿ, ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುಡುಗಿದರು.
ಲಿಂಗಸುಗೂರು ಪಟ್ಟಣದಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನೇತೃತ್ವದ ಬಳ್ಳಾರಿ ಚಲೋ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಆರು ಕೋಟಿ ಕನ್ನಡಿಗರ ಆಶೋತ್ತರದ ಕಹಳೆಯೇ ಈ ಪಾದಯಾತ್ರೆಯಾಗಿದೆ. ಇದು ಚುನಾವಣಾ ಪ್ರಚಾರದ ಸಭೆ ಅಲ್ಲ. ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತೆಗೆಯುವಂಥ ಸಂಕಲ್ಪದೊಂದಿಗೆ ನಡೆಸುತ್ತಿರುವ ಹೋರಾಟದ ಆರಂಭವಾಗಿದೆ ಎಂದರು.
ಯಾವುದೇ ಒಂದು ಸಣ್ಣ ವಿಷಯಕ್ಕೂ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಕಾಲು ಹಿಡಿಯುವ ನೀವು ಮುಖ್ಯಮಂತ್ರಿಯೇ?. ಇದು ಮುಖ್ಯಮಂತ್ರಿ ಸ್ಥಾನಕ್ಕೆ ಶೋಭೆ ತರುತ್ತದೆಯೇ?. ಮುಖ್ಯಮಂತ್ರಿಗಳಿಗೆ ಸ್ವಾತಂತ್ರ್ಯ ಏನಾದರೂ ಇದೆಯಾ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಜನರು ಪಾದಯಾತ್ರೆಗೆ ಬೆಂಬಲಿಸಬೇಕು. ಇದು ಹೋರಾಟದ ಮೊದಲ ಹೆಜ್ಜೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ಲೂಟಿ ವಿರುದ್ಧ ಮನವರಿಕೆ ಮಾಡುವಂಥ ಪಾದಯಾತ್ರೆಯಾಗಿದೆ ಎಂದು ಹೇಳಿದರು.






















