SK Home Ad
Home ನಮ್ಮ ಜಿಲ್ಲೆ ರಾಯಚೂರು ಪಾದಯಾತ್ರೆ ಬಳ್ಳಾರಿ ತಲುಪುವಷ್ಟರಲ್ಲಿ ಇನ್ನೂ ಎರಡು ವಿಕೆಟ್‌ ಖಚಿತ

ಪಾದಯಾತ್ರೆ ಬಳ್ಳಾರಿ ತಲುಪುವಷ್ಟರಲ್ಲಿ ಇನ್ನೂ ಎರಡು ವಿಕೆಟ್‌ ಖಚಿತ

0
28

ರಾಯಚೂರು: ರಾಜ್ಯ ಸರ್ಕಾರದ ವಿರುದ್ಧ ʻರಣಕಹಳೆʼ ಊದಿದ್ದು, ಈ ಹೋರಾಟ ನಿರ್ಣಾಯಕ ಹಂತ ತಲುಪುವವರೆಗೆ ವಿಶ್ರಮಿಸುವುದಿಲ್ಲ. ಈಗಾಗಲೇ ಸರ್ಕಾರದ ಒಂದು ʻವಿಕೆಟ್ʼ ಬಿದ್ದಿದೆ. ಪಾದಯಾತ್ರೆ ಬಳ್ಳಾರಿ ತಲುಪುವಷ್ಟರಲ್ಲಿ ಇನ್ನೂ ಎರಡು ವಿಕೆಟ್‌ಗಳು ಬೀಳುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ವಿಶ್ವಾಸ ವ್ಯಕ್ತಪಡಿಸಿದರು.

ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಕರ್ನಾಟಕ ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಆಡಳಿತ ವೈಪಲ್ಯ ಮತ್ತು‌ ರೈತ ವಿರೋಧಿ ಧೋರಣೆಯ ವಿರುದ್ಧ ಏರ್ಪಡಿಸಿದ ಬಳ್ಳಾರಿ ಚಲೋ ಪಾದಯಾತ್ರೆಯ ಉದ್ಘಾಟನೆಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ನಾಯಕರಾದ ಬಿ.ಎಸ್. ಯಡಿಯೂರಪ್ಪನವರು ಒಮ್ಮೆ ಬೀದಿಗಿಳಿದು ಹೋರಾಟಕ್ಕೆ ನಿಂತರೆ, ಆ ಹೋರಾಟವನ್ನು ಪೂರ್ಣಗೊಳಿಸಿ, ತಮ್ಮ ಗುರಿ ಮುಟ್ಟಿದ ಮೇಲೆಯೇ ಮನೆಗೆ ಹಿಂತಿರುಗುವ ನಾಯಕತ್ವ ಅವರದ್ದು. ಅವರ ಆಶೀರ್ವಾದ ಹಾಗೂ ನೇತೃತ್ವದಲ್ಲಿ ನಾವು ರಣರಂಗಕ್ಕೆ ದುಮುಕಿದ್ದು, ವಿಜಯಶಾಲಿಯಾಗಿ ಹೊರಬರಲಿದ್ದೇವೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

​ದಿನದಲಿತರ ಹಣ ಲೂಟಿ: “ಜನರು ನಿಮ್ಮನ್ನು ಅಧಿಕಾರಕ್ಕೆ ತಂದದ್ದು ಸ್ವಂತ ಆಸ್ತಿ ಬೆಳೆಸಿಕೊಳ್ಳಲಿಕ್ಕೊ, ರಿಯಲ್ ಎಸ್ಟೇಟ್ ಉದ್ಯಮ ಮಾಡಲಿಕ್ಕೊ ಅಥವಾ ಬಡವರ-ದೀನದಲಿತರ ಹಣವನ್ನು ಲೂಟಿ ಮಾಡಲಿಕ್ಕೊ?” ಎಂದು ಪ್ರಶ್ನಿಸಿದ ಅವರು, ಎಸ್‌ಟಿ (ST) ಜನಾಂಗಕ್ಕೆ ಸೇರಿದ ಬಡವರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಬರೋಬ್ಬರಿ 187 ಕೋಟಿ ರೂಪಾಯಿ ಹಣವನ್ನು ಸರ್ಕಾರ ಲೂಟಿ ಮಾಡಿದೆ ಎಂದು ಆರೋಪಿಸಿದರು.

​”ದಲಿತರ ಹಾಗೂ ಪರಿಶಿಷ್ಟ ಪಂಗಡದ ಜನರ ಹಣವನ್ನು ಲೂಟಿ ಮಾಡಿ, ಅದನ್ನು ನಾವು ಪ್ರಶ್ನೆ ಮಾಡಿದರೆ ನಮಗೇ ʻರಾಜಕೀಯ ಮಾಡುತ್ತಿದ್ದೀರಿʼ, ʻದಲಿತ ವಿರೋಧಿಗಳುʼ ಎಂದು ಪಟ್ಟ ಕಟ್ಟುವುದು ಎಷ್ಟರ ಮಟ್ಟಿಗೆ ಸರಿ? ನಿಜವಾದ ದಲಿತ ವಿರೋಧಿ ಕೆಲಸ ಮಾಡಿದ್ದು ಈ ಸರ್ಕಾರ” ಎಂದು ಕಿಡಿಕಾರಿದರು.​ ಲೂಟಿಯಾದ ಹಣ ಸಂಪೂರ್ಣವಾಗಿ ಹಿಂತಿರುಗಿ, ವಾಲ್ಮೀಕಿ ನಿಗಮದ ಮೂಲಕ ಎಸ್‌ಟಿ ಜನಾಂಗದ ಲಕ್ಷಾಂತರ ಫಲಾನುಭವಿಗಳಿಗೆ ತಲುಪಿ ನ್ಯಾಯ ಸಿಗುವವರೆಗೂ ಬಿಜೆಪಿ ಹೋರಾಟ ಮುಂದುವರಿಯಲಿದೆ ಎಂದರು.

​​ಉತ್ತರ ಕರ್ನಾಟಕದ ಯೋಜನೆಗಳು ಸ್ಥಗಿತ: “ಪ್ರಸ್ತುತ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರೂ ಇದ್ದಾರೆ. ಆದರೆ ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುದಾನ ನೀಡದೆ, ಯೋಜನೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ” ಎಂದು ಕಿಡಿಕಾರಿದರು.

​ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲತೆ: “ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಕೇವಲ ಸ್ಯಾಟಲೈಟ್ ಮೂಲಕ 101 ತಾಲೂಕುಗಳನ್ನು ಗುರುತಿಸಿದರೆ ಸಾಲದು. ಸರ್ಕಾರದ ನಾಯಕರು ದೆಹಲಿ ಮತ್ತು ಬೆಂಗಳೂರಿನ ವಿಮಾನಗಳಲ್ಲೇ ಹಾರಾಡುತ್ತಿದ್ದು, ಇನ್ನು ಭೂಮಿಗೆ ಇಳಿದು ಕೆಲಸ ಮಾಡುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದರು.

​ಬಿಜೆಪಿ ಹೋರಾಟ ಹಾಗೂ ಪಾದಯಾತ್ರೆ: “ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾದ ಆರ್‌. ಅಶೋಕ್, ಚಲವಾದಿ ನಾರಾಯಣಸ್ವಾಮಿ ಹಾಗೂ ಬಿ. ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ನಡೆಸಿದ ದಿಟ್ಟ ಹೋರಾಟ ಮತ್ತು ಪಾದಯಾತ್ರೆಯ ಮುನ್ಸೂಚನೆಯಿಂದಾಗಿ ಈಗಾಗಲೇ ಸರ್ಕಾರದ ಒಂದು ವಿಕೆಟ್ ಬಿದ್ದಿದೆ. ಪಾದಯಾತ್ರೆ ಬಳ್ಳಾರಿ ತಲುಪುವಷ್ಟರಲ್ಲಿ ಇನ್ನೂ ಎರಡು ವಿಕೆಟ್‌ಗಳು ಬೀಳುವುದು ಖಚಿತ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಹೋರಾಟವು ರೈತರು, ದೀನದಲಿತರು, ವಿದ್ಯಾರ್ಥಿಗಳು ಹಾಗೂ ರಾಜ್ಯದ ಸಾಮಾನ್ಯ ಜನರ ಧ್ವನಿಯಾಗಿದೆ. ಬಿಜೆಪಿ ಈ ಪ್ರತಿಯೊಬ್ಬರ ಪರವಾಗಿ ಹೋರಾಟದ ರಣರಂಗದಲ್ಲಿ ನಿಲ್ಲಲಿದೆ ಎಂದರು.

​ಮುಳುಗುತ್ತಿರುವ ಹಡಗು ಕಾಂಗ್ರೆಸ್: ಕಾಂಗ್ರೆಸ್ ಸರ್ಕಾರವನ್ನು ಮುಳುಗುತ್ತಿರುವ ಹಡಗಿಗೆ ಹೋಲಿಸಿದ ಬೊಮ್ಮಾಯಿ, ಶೀಘ್ರದಲ್ಲೇ ಕಾಂಗ್ರೆಸ್ ನಾಯಕರು ಈ ಮುಳುಗುತ್ತಿರುವ ಹಡಗಿನಿಂದ ಜಂಪ್ ಆಗಲಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರದ ಕುದುರೆ ಏರಲು ದೆಹಲಿ ಹಾಗೂ ಬೆಂಗಳೂರು ನಡುವೆ ಸತತ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಅವರಿಗೆ ಸರ್ಕಾರ ನಡೆಸಲು ಅಥವಾ ಕುದುರೆ ಏರಲು ಸಾಧ್ಯವಾಗುತ್ತಿಲ್ಲ ಎಂದು ಲೇವಡಿ ಮಾಡಿದರು.