ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಪ್ರಯುಕ್ತ ಹೊರತರಲಾದ ʻಕರ್ಮವೀರʼ ವಿಶೇಷ ಸಂಚಿಕೆಯನ್ನು ಶುಕ್ರವಾರ ರಾತ್ರಿ ಮಂತ್ರಾಲಯದಲ್ಲಿ ಬಿಡುಗಡೆಗೊಳಿಸಲಾಯಿತು.
ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಅನುಗ್ರಹ ಸಂದೇಶ ನೀಡಿದರು.
ಕರ್ಮವೀರ ವಾರಪತ್ರಿಕೆ ಕರುನಾಡಿನ ಹೆಮ್ಮೆಯ ವಾರ ಪತ್ರಿಕೆಯಾಗಿದ್ದು, ಈ ಬಾರಿ ಗುರುರಾಯರ ಆರಾಧನೆಯ ನಿಮಿತ್ತ ವಿಶೇಷ ಸಂಚಿಕೆಯನ್ನು ಅತ್ಯುತ್ತಮವಾಗಿ ಹೊರತಂದು ಓದುಗರಿಗೆ ರಾಯರ ಮಹಿಮೆ ತಿಳಿಸಿಕೊಟ್ಟಿದೆ ಎಂದು ಶ್ರೀಗಳು ಶ್ಲಾಘಿಸಿದರು.
ಲೋಕ ಶಿಕ್ಷಣ ಟ್ರಸ್ಟ್‌ನ ʻಸಂಯುಕ್ತ ಕರ್ನಾಟಕʼ ಪತ್ರಿಕೆ ಮೊದಲಿನಿಂದಲೂ ರಾಷ್ಟ್ರೀಯ ವಿಚಾರಧಾರೆ ಅಳವಡಿಸಿಕೊಂಡು ಭಾರತದ, ಕರುನಾಡಿನ ಹಿತಾಸಕ್ತಿಗಾಗಿ ಸಮರ್ಪಣೆ ಮಾಡಿಕೊಂಡು ವಿಭಿನ್ನ ಪತ್ರಿಕೆಯೆನಿಸಿಕೊಂಡಿದೆ, ಈ ಪತ್ರಿಕೆ ಈಗ ಶತಮಾನದ ಹೊಸ್ತಿಲಲ್ಲಿರುವುದು ನಮಗೆಲ್ಲ ಸಂತಸದ ಸಂಗತಿ. ಪತ್ರಿಕೆ ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ ಪ್ರಾಂಶುಪಾಲರಾದ ಪಂ. ಡಾ. ಎನ್. ವಾದಿರಾಜಾಚಾರ್ಯರು, ಶ್ರೀಪಾದಪುತ್ರರಾದ ಶ್ರೀ ರಾಜಾ ಅಪ್ರಮೇಯ ಆಚಾರ್ಯ, ಸಂಯುಕ್ತ ಕರ್ನಾಟಕ ಕಲಬುರಗಿ ಆವೃತ್ತಿಯ ಸಹಾಯಕ ಸಂಪಾದಕ ಎಚ್. ಶೇಷಗಿರಿ, ಕಚೇರಿ ವ್ಯವಸ್ಥಾಪಕ ಗಿರೀಶ ಕುಲಕರ್ಣಿ, ಉಪ ಸಂಪಾದಕ ರಾಘವೇಂದ್ರ ಶರ್ಮಾ, ಕಲಬುರಗಿಯ ಸಿವಿಲ್ ಇಂಜಿನಿಯರ್ ಮುರಳೀಧರ ಜಿ. ಕರಲಗಿಕರ್ ಸೇರಿದಂತೆ ನೂರಾರು ಭಕ್ತರು ಇದ್ದರು.






















