SK Home Ad
Home ನಮ್ಮ ಜಿಲ್ಲೆ ರಾಯಚೂರು ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಮೇಲಿನ ಪ್ರಕರಣ ವಜಾ

ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಮೇಲಿನ ಪ್ರಕರಣ ವಜಾ

0
61

ಮಸ್ಕಿ: ನೀರಿಗಾಗಿ ಹೋರಾಟ ನಡೆಸಿದ ರೈತರ ಮೇಲೆ ಕಾಂಗ್ರೆಸ್ ಸರ್ಕಾರ ದಾಖಲಿಸಿರುವ ಪ್ರಕರಣಗಳನ್ನು 2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂಪೂರ್ಣವಾಗಿ ವಜಾಗೊಳಿಸಲಾಗುವುದು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.

ಬಿಜೆಪಿಯ ʻಬಳ್ಳಾರಿ ಚಲೋʼ ಪಾದಯಾತ್ರೆ ಮಸ್ಕಿ ತಲುಪಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಅಭಿವೃದ್ಧಿ, ರೈತರ ನೀರಾವರಿ ಸಮಸ್ಯೆ ಹಾಗೂ ಎಸ್‌ಸಿ-ಎಸ್‌ಟಿ ಸಮುದಾಯದ ಹಣದ ದುರ್ಬಳಕೆ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಹೋರಾಟ ನಡೆಸುತ್ತಿದೆ ಎಂದರು.

ಮಸ್ಕಿ ಹಾಗೂ ಸುತ್ತಮುತ್ತಲಿನ ಪ್ರದೇಶದ ರೈತರ ಬಹುದಿನಗಳ ಬೇಡಿಕೆಯಾಗಿರುವ 5ಎ ಕಾಲುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಪ್ರತಾಪ್‌ಗೌಡ ಪಾಟೀಲ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕಾಮಗಾರಿಗೆ ಹಣ ಮಂಜೂರು ಮಾಡಲಾಗಿದೆ ಎಂದು ಹೇಳಿಕೊಂಡರೂ, ನೆಲಮಟ್ಟದಲ್ಲಿ ಕಾಮಗಾರಿ ಮಾತ್ರ ಆರಂಭವಾಗಿಲ್ಲ ಎಂದು ಶ್ರೀರಾಮುಲು ಆರೋಪಿಸಿದರು.

ನೀರಿಗಾಗಿ ರೈತರು ಹೋರಾಟ ನಡೆಸುವುದು ಅವರ ಹಕ್ಕು. ಆದರೆ, ಇದೇ ಹೋರಾಟದಲ್ಲಿ ಭಾಗವಹಿಸಿದ ರೈತರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ರೈತರ ಧ್ವನಿಯನ್ನು ಹತ್ತಿಕ್ಕುವ ಬದಲು ಅವರ ಬೇಡಿಕೆಗಳನ್ನು ಈಡೇರಿಸುವ ಕೆಲಸ ಸರ್ಕಾರ ಮಾಡಬೇಕು. 2028ರಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ನೀರಾವರಿಗಾಗಿ ಹೋರಾಟ ನಡೆಸಿದ ರೈತರ ಮೇಲಿನ ಪ್ರಕರಣಗಳನ್ನು ಪರಿಶೀಲಿಸಿ ಸಂಪೂರ್ಣವಾಗಿ ವಜಾಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.