ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಯುವ ದಸರಾ-2026ರ ಉದ್ಘಾಟನಾ ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದೆ.
ಯುವದಸರಾ ಸಮಿತಿಯ ಕಾರ್ಯಾಧ್ಯಕ್ಷ ಜಿ. ಸೋಮಶೇಖರ್ ಹಾಗೂ ಕಾರ್ಯದರ್ಶಿಗಳಾದ ಅರುಣ್ ಮತ್ತು ಸತ್ಯಮೂರ್ತಿ ಅವರು ಚೆನ್ನೈನಲ್ಲಿರುವ ಪ್ರಭುದೇವ ಅವರ ನಿವಾಸಕ್ಕೆ ತೆರಳಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.
ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದ ಪ್ರಭುದೇವ ಅವರು ಯುವ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ. ಮೈಸೂರಿನವರೇ ಆಗಿರುವ ಪ್ರಭುದೇವ ಅವರ ಆಗಮನವು ಈ ಬಾರಿಯ ಯುವದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಯುವಜನರನ್ನು ಕೇಂದ್ರವಾಗಿಟ್ಟುಕೊಂಡು ನಡೆಯುವ ಯುವ ದಸರಾ ಕಾರ್ಯಕ್ರಮದಲ್ಲಿ ಪ್ರಭುದೇವ ಅವರ ಉಪಸ್ಥಿತಿ ವಿಶೇಷ ಆಕರ್ಷಣೆಯಾಗುವ ನಿರೀಕ್ಷೆ ಮೂಡಿಸಿದೆ. ಅವರ ನೃತ್ಯ ಮತ್ತು ಚಿತ್ರರಂಗದ ಜನಪ್ರಿಯತೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರನ್ನು ಸೆಳೆಯುವ ಸಾಧ್ಯತೆಯಿದೆ.






















