ಸಂ.ಕ. ಸಮಾಚಾರ ಮೈಸೂರು: ನಾನು ಮೋದಿ ಗುಟ್ಟಾಗಿ ಏನು ಮಾತನಾಡಿಲ್ಲ. ಮಹಿಳಾ ಮೀಸಲಾತಿ ಬಗ್ಗೆ ನಿಮ್ಮ ನಿಲುವು ಏನೆಂದು ಕೇಳಿದರು. ನಾನು ಮಹಿಳಾ ಮೀಸಲಾತಿ ಪರವಾಗಿದ್ದೇನೆ ಎಂದು ಹೇಳಿದ್ದೆನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಿಲುವು ಕೇಳಿದರು. ಅದಕ್ಕೆ ಉತ್ತರ ನೀಡಿದ್ದೆನೆ ಎಂದರು.
ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರುದ್ಧ ಇಲ್ಲ. ಕ್ಷೇತ್ರ ಪುನರವಿಂಗಡಣೆ ವಿಚಾರವಾಗಿ ಮಾತ್ರ ನಮ್ಮ ತಕರಾರು ಇದೆ. ಮಹಿಳಾ ಮೀಸಲಾತಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಮೀಸಲಾತಿ ಜಾರಿಯ ಬದ್ಧತೆ ಬಿಜೆಪಿಗೆ ಇಲ್ಲ ಎಂದು ಕಿಡಿಕಾರಿದರು. ಬಿಜೆಪಿ ವಿಧೇಯಕದ ವಿಚಾರದಲ್ಲಿ ಸುಳ್ಳು ಹೇಳುತ್ತಾ ರಾಜಕಾರಣ ಮಾಡುತ್ತಿದೆ 2023 ಮೀಸಲಾತಿ ವಿಧೇಯಕ ಇತ್ತು. ಅದನ್ನು ಅವತ್ತೇ ಯಾಕೆ ಜಾರಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಕ್ಷೇತ್ರ ಪುನರವಿಗಂಡಣೆ ವಿಚಾರದಲ್ಲಿ ಏಕೆ ಅದನ್ನು ತಳಕು ಹಾಕಲಾಗುತ್ತಿದೆ. ಹೊಸ ಜನಗಣತಿ ಪ್ರಕಾರ ಕ್ಷೇತ್ರ ಪುನರವಿಂಗಡಣೆಯಾಗಬೇಕು. ಭೌಗೋಳಿಕ ವ್ಯಾಪ್ತಿ ಮತ್ತು ಜನ ಸಂಖ್ಯೆ ಕ್ಷೇತ್ರ ಪುನರವಿಂಗಡಣೆಗೆ ಮುಖ್ಯ. ಹೀಗಾಗಿ ಹಳೇಯ ಜನಗಣತಿ ಪ್ರಕಾರ ಮಾಡಿದರೆ ಕರ್ನಾಟಕಕ್ಕೆ ಅನ್ಯಾಯ ಆಗುತ್ತದೆ. ಉತ್ತರ ಭಾರತದ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಮಾಡಿಯೇ ಇಲ್ಲ. ನಾವು ಇಲ್ಲಿ ಜನಸಂಖ್ಯೆ ನಿಯಂತ್ರಣ ಮಾಡಿದ್ದೇವೆ. ನಮಗೆ ಇಲ್ಲಿ ಅನ್ಯಾಯ ಆಗಬಾರದು ಎಂದರು.
ಶಾಸಕ ಎನ್.ಎ ಹ್ಯಾರೀಸ್ ಅವರ ಮನೆಯ ಮೇಲೆ ಇಡಿ ದಾಳಿಯಾಗಿರುವ ವಿಚಾರ ನನಗೆ ಗೊತ್ತಿಲ್ಲ ಎಂದು ಸಿಎಂ ಹೇಳಿದರು.
ಪಂಚರಾಜ್ಯ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿಗೆ ಪ್ರಚಾರಕ್ಕೆ ಹೋಗುವುದಿಲ್ಲ. ಮೂಲಗಳ ಪ್ರಕಾರ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಮಿತ್ರ ಪಕ್ಷಗಳು ಗೆಲ್ಲಲಿದ್ದು ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯವರು ಪಂಚರಾಜ್ಯ ಚುನಾವಣೆಯಲ್ಲಿ ನಮ್ಮ ಗ್ಯಾರೆಂಟಿಗಳನ್ನು ನಕಲು ಮಾಡಿಕೊಂಡಿದ್ದಾರೆ. ಗ್ಯಾರೆಂಟಿಗಳನ್ನು ಮೊದಲು ಬಿಜೆಪಿ ವಿರೋಧ ಮಾಡುತ್ತಿತ್ತು. ಈಗ ಇದನ್ನು ಅವರೇ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಮಹಿಳಾ ಮೀಸಲಾತಿ ಮಸೂದೆಯನ್ನು ತಿರಸ್ಕರಿಸುವ ಮೂಲಕ ಕಾಂಗ್ರೆಸ್ ಭ್ರೂಣ ಹತ್ಯೆ ಮಾಡಿದೆ ಎಂದು ಪ್ರಧಾನಿ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಪ್ರಧಾನಿಗಳದ್ದು ತಾರತಮ್ಯದ ಧೋರಣೆಯಾಗಿದ್ದು, ಅವರು ಸಾಮಾಜಿಕ ನ್ಯಾಯದ ಪರವಾಗಿಲ್ಲ ಎಂದು ಹೇಳಿದರು.






















