ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುವ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ಕ್ಕೆ ದಿನಾಂಕ ಮತ್ತು ಶುಭ ಮುಹೂರ್ತಗಳನ್ನು ಅಧಿಕೃತವಾಗಿ ನಿಗದಿಪಡಿಸಲಾಗಿದ್ದು, ದಸರಾ ಸಿದ್ಧತೆಗಳಿಗೆ ಚಾಲನೆ ದೊರೆತಿದೆ. ಗಜಪಡೆಯ ಆಗಮನದಿಂದ ಹಿಡಿದು ದಸರಾ ಉದ್ಘಾಟನೆ ಹಾಗೂ ವಿಜಯದಶಮಿ ಜಂಬೂಸವಾರಿವರೆಗಿನ ಸಂಪೂರ್ಣ ವೇಳಾಪಟ್ಟಿ ಸಿದ್ಧವಾಗಿದ್ದು, ಮೈಸೂರಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.
ಆಗಸ್ಟ್ 26ರಂದು ಗಜಪಡೆಗೆ ಅದ್ದೂರಿ ಸ್ವಾಗತ : ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಆಗಸ್ಟ್ 26ರಂದು ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಮೈಸೂರು ಅರಮನೆಯ ಪ್ರವೇಶ ದ್ವಾರದಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಲಾಗುತ್ತದೆ.
ಇದನ್ನೂ ಓದಿ: ವಯಸ್ಸು 12, ಸಾಧನೆ ಅಪಾರ: ಉದ್ಯಮಿಗಳಿಗೆ ವರವಾದ Ai ಆವಿಷ್ಕಾರ!
ಗಜಪಡೆಯ ಆಗಮನದೊಂದಿಗೆ ದಸರಾ ಸಿದ್ಧತೆಗಳಿಗೆ ಮತ್ತಷ್ಟು ವೇಗ ಸಿಗಲಿದ್ದು, ಅರಮನೆ ಆವರಣದಲ್ಲಿ ಆನೆಗಳಿಗೆ ವಿಶೇಷ ತಾಲೀಮು ಹಾಗೂ ಪೌಷ್ಟಿಕ ಆಹಾರ ವ್ಯವಸ್ಥೆ ಆರಂಭವಾಗಲಿದೆ.
ಅಕ್ಟೋಬರ್ 11ರಂದು ದಸರಾ ಉದ್ಘಾಟನೆ : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅಕ್ಟೋಬರ್ 11ರ ಭಾನುವಾರ ಮುಂಜಾನೆ ಚಾಲನೆ ದೊರೆಯಲಿದೆ. ಸಂಪ್ರದಾಯದಂತೆ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ರಾಜ್ಯ ಸರ್ಕಾರ ಶೀಘ್ರದಲ್ಲೇ ಉದ್ಘಾಟಕರ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಕಾಶ್ಮೀರದ ಯುವ ಉದ್ಯಮಿಗೆ ಕನ್ನಡಿಗರಿಂದ ಪ್ರಶಂಸೆಗಳ ಮಹಾಪೂರ
ಕಳೆದ ವರ್ಷ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ದಸರಾ ಮಹೋತ್ಸವವನ್ನು ಉದ್ಘಾಟಿಸಿದ್ದರು.
ಅಕ್ಟೋಬರ್ 21ರಂದು ವಿಜಯದಶಮಿ ಜಂಬೂಸವಾರಿ : ದಸರಾ ಮಹೋತ್ಸವದ ಅತ್ಯಂತ ಪ್ರಮುಖ ಕಾರ್ಯಕ್ರಮವಾದ ವಿಜಯದಶಮಿ ಜಂಬೂಸವಾರಿ ಅಕ್ಟೋಬರ್ 21ರಂದು ನಡೆಯಲಿದೆ. ಸಾಂಪ್ರದಾಯಿಕ ಶುಭ ಮುಹೂರ್ತದಂತೆ ಅಂದು ಸಂಜೆ 4.10 ಗಂಟೆಗೆ ಮೀನಾ ಲಗ್ನದಲ್ಲಿ ಮುಖ್ಯಮಂತ್ರಿ ಜಂಬೂಸವಾರಿಗೆ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ. ಬಳಿಕ ಅಲಂಕೃತ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ಸಾಗುವ ಜಂಬೂಸವಾರಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.
ಇದನ್ನೂ ಓದಿ: ‘ಶ್ರೀ ರಾಮ ಭೂಮಿ’ ಚಿತ್ರದಲ್ಲಿ ಅನುಪಮ್ ಖೇರ್ ಹೊಸ ಲುಕ್
ಹಬ್ಬದ ಸಡಗರಕ್ಕೆ ಮೈಸೂರು ಸಜ್ಜು : ದಸರಾ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತ, ಅರಮನೆ ಮಂಡಳಿ ಮತ್ತು ವಿವಿಧ ಇಲಾಖೆಗಳು ಸಿದ್ಧತೆಗಳನ್ನು ಆರಂಭಿಸಿವೆ. ಅರಮನೆ ವಿದ್ಯುತ್ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ದಸರಾ, ಆಹಾರ ಮೇಳ, ವಸ್ತುಪ್ರದರ್ಶನ ಹಾಗೂ ಕ್ರೀಡಾಕೂಟ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ರೂಪುರೇಷೆ ಸಿದ್ಧವಾಗುತ್ತಿದೆ.
ಪ್ರತಿ ವರ್ಷ ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮೈಸೂರು ದಸರಾ ವೀಕ್ಷಿಸಲು ಆಗಮಿಸುವ ಹಿನ್ನೆಲೆಯಲ್ಲಿ ಈ ಬಾರಿಯೂ ಅದ್ಧೂರಿ ಮತ್ತು ಜನಾಕರ್ಷಕ ಆಚರಣೆಗೆ ಸರ್ಕಾರ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.






















